ಗದಗ: ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛಮಾಡುವ ಮೂಲಕ ಸಾರ್ವಜನಿಕವಾಗಿ ಜನ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ನಾಗರಿಕರ ಕರ್ತವ್ಯ ಎಂದು ಅಂತೂರು ಬೆಂತೂರು ಗ್ರಾಪಂ ಅಧ್ಯಕ್ಷ ಪ್ರಕಾಶಗೌಡ ಎಚ್. ಪಾಟೀಲ ಹೇಳಿದರು.
ತಾಲೂಕಿನ ಅಂತೂರು-ಬೆಂತೂರು ಗ್ರಾಮದಲ್ಲಿ ಗದುಗಿನ ಆದರ್ಶ ಶಿಕ್ಷಣ ಸಂಸ್ಥೆಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ವಿಶೇಷ ವಾರ್ಷಿಕ ಶಿಬಿರದಲ್ಲಿ ದೇವಸ್ಥಾನಗಳ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಮಾನ್ಯ ಜನರು ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಬಗ್ಗೆ ಪವಿತ್ರ ಭಾವನೆ ಹೊಂದಿರುತ್ತಾರೆ. ಆ ಜಾಗಗಳು ಮಲಿನವಾಗಲು ಬಿಡುವುದಿಲ್ಲ ಎಂದು ಹೇಳಿದರು.ಗ್ರಾಮ ಸ್ವಚ್ಛವಾಗಿರಲು ಜನರಲ್ಲಿ ಸ್ವಚ್ಛತೆಯ ಪರಿಕಲ್ಪನೆ ಬರಬೇಕು. ಗ್ರಾಮಗಳ ಉದ್ಧಾರವಾದರೆ ದೇಶ ಬೆಳೆಯುವುದು. ಹಾಗೆ ಗ್ರಾಮವನ್ನು ಶುಚಿಗೊಳಿಸುವುದರೊಂದಿಗೆ ಧಾರ್ಮಿಕ ಕ್ಷೇತ್ರಗಳನ್ನು ನಾವು ಶುಚಿಗೊಳಿಸಬೇಕು. ಸ್ವಚ್ಛತೆಯೇ ಒಂದು ರೀತಿಯಲ್ಲಿ ನಮ್ಮ ಜೀವನಕ್ಕೆ ಆಧಾರ. ನಮ್ಮ ಜೀವನದಲ್ಲಿ ಸ್ವಚ್ಛತೆಗೆ ಮಹತ್ವದ ಪಾತ್ರವಿದೆ. ನಾವು ನಿಯಮಿತವಾಗಿ ನಮ್ಮ ನೈರ್ಮಲ್ಯವನ್ನು ನೋಡಿಕೊಳ್ಳಬೇಕು ಎಂದರು.ಗ್ರಾಮದ ಹಿರಿಯ ವೈದ್ಯಾಧಿಕಾರಿ ಡಾ. ಆರ್.ಎಸ್. ಆಲೂರ ಮಾತನಾಡಿ, ನಾವೆಲ್ಲರೂ ಸ್ವಚ್ಛತೆಯನ್ನು ರೂಢಿಸಿಕೊಳ್ಳಬೇಕು. ಶುಚಿತ್ವ ಎಂದರೆ ನಿಮ್ಮ ದೇಹ, ಮನಸ್ಸು ಮತ್ತು ನಿಮ್ಮ ಸುತ್ತಲಿರುವ ಎಲ್ಲವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಸ್ವಚ್ಛತೆಯನ್ನು ಭಾರತೀಯ ಸಂಸ್ಕೃತಿಯ ಪ್ರತೀಕವೆಂದು ಪರಿಗಣಿಸಲಾಗಿದೆ. ದೇಹ, ಮನಸ್ಸು, ಆತ್ಮ, ಬುದ್ಧಿ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾನವ ಜೀವನದ ಪ್ರಮುಖ ಕಾರ್ಯವಾಗಿದೆ ಎಂದರು.
ಈ ವೇಳೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ. ಬಾಹುಬಲಿ ಪಿ. ಜೈನರ, ಪ್ರೊ. ಶರೀಫ್ ಬೆನಕಲ್, ಪ್ರಾಣೇಶ್ ಬೆಳ್ಳಟ್ಟಿ, ಶಿವಕುಮಾರ ಕಣವಿ, ಶ್ರೀಕಾಂತ್, ವಿದ್ಯಾರ್ಥಿ ಮುಖಂಡ ಮನೋಜ್ ದಲಬಂಜನ್ ಹಾಗೂ ಗ್ರಾಮದ ಗುರು-ಹಿರಿಯರು, ಸ್ವಯಂಸೇವಕರು ಇದ್ದರು.