ಕನ್ನಡಪ್ರಭ ವಾರ್ತೆ ಬೀಳಗಿ
ರಾಜ್ಯದಲ್ಲಿ ವಕ್ಫ್ ಸಚಿವರ ಚಿತಾವಣೆಯ ಮೇರೆಗೆ ಜಿಲ್ಲಾಧಿಕಾರಿಗಳು 1974ರ ಗೆಜೆಟ್ ಕ್ರಮಕ್ಕೆ ಮುಂದಾಗಿದ್ದಾರೆ. ರೈತರು ಮಾತ್ರವಲ್ಲ, ಮಠ, ಮಂದಿರಗಳ ಆಸ್ತಿಗಳನ್ನೂ ಕಬಳಿಸುವ ಸಂಚು ರೂಪಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇದು ಖಂಡನೀಯವಾಗಿದ್ದು, ಇದನ್ನು ವಿರೋಧಿಸಿ ತಾಲೂಕು ಕೇಂದ್ರದಲ್ಲಿ ನ.5 ರಂದು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.ಪಟ್ಟಣದ ನಿರಾಣಿ ಅವರ ಸ್ವ ಗ್ರಹದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಅವಧಿಯಲ್ಲಿ ಸಾವಿರಾರು ನೋಟಿಸ್ ನೀಡಲಾಗಿತ್ತು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳುವುದರಲ್ಲಿ ಅರ್ಥವಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಇಂತಹ ನೋಟಿಸ್‌ಗಳು ಹೋಗಿದ್ದವು. ಆಗ ಸಚಿವರೇ ಎದುರು ನಿಂತು ರೈತರ ನೆರವಿಗೆ ಬಂದಿದ್ದರು. ಈಗ ಸಚಿವರ ಕುಮ್ಮಕ್ಕಿನಿಂದಲೇ ರೈತರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.ಸರ್ಕಾರವೇ ಮಾಡಿದ ತಪ್ಪು ಇದಾಗಿದ್ದು, ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಹೇಳುವುದು ತಪ್ಪು. ಏಕೆಂದರೆ ವಕ್ಫ್ ಸಚಿವರು ಜಿಲ್ಲಾವಾರು ಸಭೆ ನಡೆಸಿ, ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದ ಮೇಲೆ ರಾತ್ರೋರಾತ್ರಿ ಪಹಣಿಯ ಕಾಲಂ ನಂ. 9ರಲ್ಲಿ ವಕ್ಫ್ ಆಸ್ತಿ ಎಂದು ಹೆಸರು ನಮೂದಾಗುತ್ತಿದೆ ಮತ್ತು ನೋಟಿಸ್ ನೀಡಲಾಗುತ್ತಿದೆ. ರೈತರು ತಮ್ಮ ಅಳಲು ಹೇಳಿಕೊಂಡ ಕಾರಣ ಬಿಜೆಪಿ ಈ ವಿಷಯ ಕೈಗೆತ್ತಿಕೊಂಡಿದೆ. ಇದರಲ್ಲಿ ರಾಜಕೀಯ ಮಾಡುವುದೇನಿದೆ ಎಂದು ಪ್ರಶ್ನಿಸಿದರು.ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಕ್ಫ್ ಮಸೂದೆಯ ಆಶಯವೇನೆಂದರೆ ಯಾರಿಗೆ ವಕ್ಫ್ ಆಸ್ತಿ ಸಿಗಬೇಕು ಎಂದಿದೆಯೋ ಅವರಿಗೇ ದೊರಕಿಸುವುದಾಗಿದೆ. ಅದೆಷ್ಟೋ ಕಡು ಬಡವರಿದ್ದು, ಅವರಿಗೆ ಅದರ ಪ್ರಯೋಜನ ಸಿಗಬೇಕಾಗುತ್ತದೆ. ವಕ್ಫ್ ಆಸ್ತಿ ಕೆಲವೇ ಕೆಲವು ಬಲಾಢ್ಯರ ಕೈಯಲ್ಲೇ ಉಳಿದುಬಿಟ್ಟಿದೆ. ಕೇಂದ್ರದ ಈ ಯೋಜನೆಯನ್ನು ಬುಡಮೇಲು ಮಾಡುವುದಕ್ಕಾಗಿಯೇ ರಾಜ್ಯ ಸರ್ಕಾರ ಮಸೂದೆ ಅಂಗೀಕಾರವಾಗುವುದಕ್ಕೆ ಮೊದಲಾಗಿ ರೈತರಿಗೆ ನೋಟಿಸ್ ನೀಡಿ ಜಾಗ ಕಬಳಿಸುವ ಹುನ್ನಾರ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಈ ಹುನ್ನಾರವನ್ನು ಅರಿತುಕೊಂಡು ಬೇಗ ಮಸೂದೆ ಅಂಗೀಕಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಕೂಡಲೇ ಸರ್ಕಾರ ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದು ಹೇಳುವುದೆಲ್ಲ ಕಣ್ಣೊರೆಸುವ ತಂತ್ರವಾಗದೇ ಪಹಣಿಯಲ್ಲಿ ವಕ್ಫ್ ಎಂದು ನಮೂದಾದರೇ ಒಂದಲ್ಲ ಒಂದು ದಿನ ರೈತರಿಗೆ ಸಂಕಷ್ಟ ಎದುರಾಗುವುದು ನಿಶ್ಚಿತ. ಹೀಗಾಗಿ ವಕ್ಫ್ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ತಡೆಗಟ್ಟುವುದೇ ಬಿಜೆಪಿ ಉದ್ದೇಶ ಎಂದು ತಿಳಿಸಿದರು.ಕೇಂದ್ರದ ಹೊಸ ಕಾಯ್ದೆ ಜಾರಿಗೆ ಬಂದರೂ ಅದು ಪೂರ್ವಾನ್ವಯವಾಗುವುದಿಲ್ಲ. ಹೀಗಾಗಿಯೇ ಅದರ ಮೊದಲಾಗಿ ಸಾಧ್ಯವಾದಷ್ಟು ಅಧಿಕ ಪ್ರಮಾಣದಲ್ಲಿ ರೈತರ, ಮಠ, ಮಂದಿರಗಳ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ ಎಂದು ದೂರಿದರು.ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲಿಕಾರ್ಜುನ ಅಂಗಡಿ, ಎಂ.ಎಂ.ಶಂಬೋಜಿ, ಹೊಳೆಬಸು ಬಾಳಾಶೆಟ್ಟಿ, ಸಿದ್ದು ಮಾದರ, ಮುತ್ತು ಬೋರ್ಜ ಸೇರಿದಂತೆ ಇತರರು ಇದ್ದರು.