ಕಾಂಗ್ರೆಸ್‌ ಸರ್ಕಾರ ಜನತೆಗೆ ನರಕ ತೋರಿಸ್ತಿದೆ

KannadaprabhaNewsNetwork | Published : Mar 5, 2025 12:34 AM

ಸಾರಾಂಶ

ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕೊಟ್ಟು, ಪುರುಷರಿಂದ ಹೆಚ್ಚುವರಿ ಟಿಕೆಟ್ ದರ ಪಡೆದುಕೊಳ್ಳುತ್ತಿದೆ. ಜೊತೆಗೆ ಬೆಂಗಳೂರಿನ ಮೆಟ್ರೋ ರೈಲು ಪ್ರಯಾಣ ದರ ಸಹ ಏರಿಕೆ ಮಾಡಿದೆ. ಅದನ್ನು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸುಳ್ಳು ಆಶ್ವಾಸನೆಗಳು, ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಚುನಾವಣಾ ಸಮಯದಲ್ಲಿ ಜನರಿಗೆ ಸ್ವರ್ಗ ತೋರುಸುತ್ತೇವೆ ಅಂತಾ ಹೇಳಿ ಇದೀಗ ನರಕ ತೋರಿಸುತ್ತಿದೆ. ಬರುವ ಬಜೆಟ್‌ನಲ್ಲಿ ರಾಜ್ಯದ ಜನರ ಮೇಲೆ ಎಷ್ಟು ಪ್ರಮಾಣದ ಸಾಲ ಹೊರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ತಾಲೂಕಿನ ಎಲ್ಲೋಡು ಗ್ರಾಮದ ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಅಡಿಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚಿಂತಾಮಣಿ - ಗೌರಿಬಿದನೂರು ರಸ್ತೆಯ (ರಾಜ್ಯ ಹೆದ್ದಾರಿ - 82) ಚೇಳೂರು, ಬಾಗೇಪಲ್ಲಿ, ಎಲ್ಲೋಡು, ಮಲ್ಲೇನಹಳ್ಳಿ ಕ್ರಾಸ್, ವಾಟದಹೊಸಹಳ್ಳಿ ರಸ್ತೆ ಮಾರ್ಗದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ 3 ಕಿ.ಮಿ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕೊಟ್ಟು ಕಿತ್ತುಕೊಳ್ಳುವ ಯೋಜನೆ

ರಾಜ್ಯ ಸರ್ಕಾರ ವಿಧಾನಸಭಾ ಚುನಾವಣಾ ಸಮಯದಲ್ಲಿ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡುವುದಾಗಿ, ಗ್ಯಾರಂಟಿಗಳನ್ನು ಕೊಡುವುದಾಗಿ ಹೇಳಿ ಅಧಿಕಾರ ಗಿಟ್ಟಿಸಿಕೊಂಡಿದೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳನ್ನೇನೋ ಜಾರಿ ಮಾಡಿದೆ. ಆದರೆ ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಿತ್ತುಕೊಳ್ಳುವಂತಹ ಕೆಲಸ ಮಾಡುತ್ತಿದೆ. ಶಕ್ತಿ ಯೋಜನೆಯ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕೊಟ್ಟು, ಪುರುಷರಿಂದ ಹೆಚ್ಚುವರಿ ಟಿಕೆಟ್ ದರ ಪಡೆದುಕೊಳ್ಳುತ್ತಿದೆ. ಜೊತೆಗೆ ಬೆಂಗಳೂರಿನ ಮೆಟ್ರೋ ರೈಲು ಪ್ರಯಾಣ ದರ ಸಹ ಏರಿಕೆ ಮಾಡಿದೆ. ಅದನ್ನು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ದಿವಾಳಿ

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ಯಾಕ್ಸ್ ಕಡಿತಗೊಳಿಸಿ ಅನುಕೂಲ ಮಾಡಿದೆ. ಮಧ್ಯಮವರ್ಗದ ಜನತೆ ಕಟ್ಟುವಂತಹ ಟ್ಯಾಕ್ಸ್ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾಡಿದೆ. ಈ ರೀತಿಯ ಜನಪರವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು ಎನ್.ಡಿ.ಎ ಸರ್ಕಾರದಿಂದ ಮಾತ್ರ ಸಾಧ್ಯ. ಆದರೆ ರಾಜ್ಯ ಸರ್ಕಾರ ಮಾತ್ರ ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರವನ್ನು ದಿವಾಳಿ ಮಾಡಿದೆ ಎಂದರು.

ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ ಒಕ್ಕೂಟದ ವ್ಯವಸ್ಥೆಯ ಬಗ್ಗೆ ಗೌರವ ಅನ್ನೋದು ಇಲ್ಲ. ಶಿಷ್ಟಚಾರ ಪಾಲಿಸುತ್ತಿಲ್ಲ. ಇದು ಮುಂದುವರಿದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರದ ಅನುದಾಗಳಡಿ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಸಂಸದರಿಗೆ ಮಾಹಿತಿ ನೀಡಬೇಕು, ಆದರೆ ಈ ವ್ಯವಸ್ಥೆ ರಾಜ್ಯದಲ್ಲಿ ಪಾಲನೆ ಮಾಡುತ್ತಿಲ್ಲ. ಯಾವುದೇ ಅನುದಾನವಿರಲಿ ಶಿಷ್ಟಾಚಾರ ಪಾಲಿಸಬೇಕು. ಅನೇಕ ಕಡೆ ಇದೇ ರೀತಿಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ ಎಂದರು.

ಜನತೆಗೆ ಮಾಡಿದ ಅವಮಾನ

ರಾಜ್ಯ ಸರ್ಕಾರಕ್ಕೆ ಶಿಷ್ಟಚಾರ, ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ ಅಂತಾ ಕೇಂದ್ರ ಅನುದಾನ ನಿಲ್ಲಿಸಿದರೇ ಸರ್ಕಾರಗಳನ್ನು ನಡೆಸಲು ಆಗುತ್ತದೆಯೇ, ನಿಮ್ಮ ಮನೆಗಳಿಂದ ತಂದ ಅನುದಾನವಾದರೇ ನಾವು ನಿಮ್ಮನ್ನು ಕೇಳುವುದೇ ಇಲ್ಲ. ಆದರೆ ಇದು ಕೇಂದ್ರ-ರಾಜ್ಯ ಸರ್ಕಾರದ ಹಣ, ನಾನು ಎಂಟು ಕ್ಷೇತ್ರಗಳ ಜನರಿಂದ ಆಯ್ಕೆಯಾದವನು. ಇದು 8 ಕ್ಷೇತ್ರಗಳ ಜನತೆಗೆ ಮಾಡುವಂತಹ ಅವಮಾನ ಎಂದೇ ಭಾವಿಸಬೇಕಾಗುತ್ತದೆ ಎಂದರು.

ಈ ಸಮಯದಲ್ಲಿ ಸಮಾಜ ಸೇವಕ ಹರಿನಾಥರೆಡ್ಡಿ, ಮುಖಂಡರಾದ ಕೋನಪ್ಪರೆಡ್ಡಿ, ಚೆನ್ನಕೃಷ್ಣಾರೆಡ್ಡಿ, ಅಶ್ವತ್ಥರೆಡ್ಡಿ, ಮದ್ದರೆಡ್ಡಿ, ಬೈರಾರೆಡ್ಡಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ ಸೇರಿದಂತೆ ಹಲವರು ಇದ್ದರು.

Share this article