ಉತ್ತರ ಕರ್ನಾಟಕ ವಿರೋಧಿ ಕಾಂಗ್ರೆಸ್ ಸರ್ಕಾರವಿದು: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Mar 05, 2025, 12:34 AM IST

ಸಾರಾಂಶ

ನಟ್ಟು, ಬೋಲ್ಟ್ ಡಿಕೆಶಿ ಹೇಳಿಕೆ ವಿಚಾರವಾಗಿ, ಡಿಕೆಶಿ ಅವರಿಗೆ ವಿನಮ್ರವಾಗಿ ಹೇಳುತ್ತೇನೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಯಾರೂ ನಿಮ್ಮ ಗುಲಾಮರಲ್ಲ. ಅಧಿಕಾರ ಶಾಶ್ವತ ಎನ್ನುವ ರೀತಿಯ ವರ್ತನೆ ಸರಿಯಲ್ಲ. ಭಂಡತನ ಬಿಟ್ಟು ತಪ್ಪಿಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯದ ಜೊತೆಗೆ ತೋಟಗಾರಿಕೆ ವಿಶ್ವವಿದ್ಯಾಲಯವನ್ನೂ ತರುವ ಕುತಂತ್ರ ನಡೆಯುತ್ತಿದೆ. ಉತ್ತರ ಕರ್ನಾಟಕಕ್ಕೆ ಕೊಟ್ಟ ವಿವಿಯನ್ನು ಕಿತ್ತು ಇಲ್ಲಿಗೆ ತರುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ನಡೆದ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವವಿದ್ಯಾಲಯ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಮಂಡ್ಯಕ್ಕೆ ಬೇರೊಂದು ವಿಶ್ವವಿದ್ಯಾಲಯವನ್ನು ತರಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ಚಲುವರಾಯಸ್ವಾಮಿ ರಾಜ್ಯದ ಸಚಿವರು. ಹಾಗಾಗಿ ಈ ರೀತಿಯ ತಾರತಮ್ಯ ಮಾಡಬಾರದು. ಎಲ್ಲಾ ಜಿಲ್ಲೆಗೆ ನ್ಯಾಯ ಕೊಡುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.

ಬಾಗಲಕೋಟೆ ತೋಟಗಾರಿಕೆ ವಿವಿ ಮುಚ್ಚುವ ಯತ್ನ:

ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಇದೆ. ಅದನ್ನು ಮುಚ್ಚಿ ಅಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಇಲ್ಲಿಗೆ ತರುವುದಕ್ಕೆ ಹೊರಟಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಅವಧಿಯಲ್ಲಿ ತೆರೆಯಲಾದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಹಣಕಾಸಿನ ಕೊರತೆಯ ಕಾರಣ ಮುಂದಿಟ್ಟುಕೊಂಡು ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಅಭಿವೃದ್ಧಿ ವಿರೋಧಿ, ಅಸಮರ್ಥ ಸರ್ಕಾರ:

ರಾಜ್ಯದಲ್ಲಿರುವುದು ಅಭಿವೃದ್ಧಿ ವಿರೋಧಿ, ಅಸಮರ್ಥ, ದಲಿತ, ಹಿಂದುಳಿದ ವರ್ಗಗಳ ವಿರೋಧಿ ಸರ್ಕಾರ, ಇದು ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರ. ಈ ಸರ್ಕಾರ ಜನವಿರೋಧಿ, ಬಡವಿರೋಧಿಯಾಗಿದ್ದು, ಇಂತಹ ದುಷ್ಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಆ ಕೆಲಸವನ್ನು ಅಧಿವೇಶನದಲ್ಲಿ ಮಾಡುತ್ತೇವೆ. ಕಾಂಗ್ರೆಸ್‌ನ ಎಲ್ಲಾ ಜನವಿರೋಧಿ ನಿಲುವುಗಳನ್ನು ಬಿಜೆಪಿ ಶಾಸಕರು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿಹಾಕುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಾರಿಗೆ ಸಂಸ್ಥೆಗೆ ೭ ಸಾವಿರ ಕೋಟಿ ರು. ಪಾವತಿಸಬೇಕಿದೆ. ವಿದ್ಯುತ್ ನಿಗಮಗಳಿಗೆ ಹಣ ಪಾವತಿಸಿಲ್ಲ. ಇಂತಹ ಕಾಂಗ್ರೆಸ್ ಸರ್ಕಾರದ ಕಿವಿಹಿಂಡಬೇಕಿದೆ. ಇದು ನುಡಿದಂತೆ ನಡೆದ ಸರ್ಕಾರವಲ್ಲ. ರಾಜ್ಯದ ಜನರೆದುರು ಮುಗ್ಗರಿಸಿಬಿದ್ದಿರುವ ಸರ್ಕಾರ ಎಂದು ಲೇವಡಿ ಮಾಡಿದರು.

ನಾನೂ ಕೂಡ ಜಿಲ್ಲೆಯ ಮೊಮ್ಮಗ..!:

ಮಂಡ್ಯ ಜಿಲ್ಲೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ಪುಣ್ಯಭೂಮಿ. ಬೂಕನಕೆರೆಯ ಯಡಿಯೂರಪ್ಪಗೆ ಜನ್ಮ ಕೊಟ್ಟ ಊರು.

ನಾನು ಕೂಡ ಮಂಡ್ಯ ಜಿಲ್ಲೆಯ ಮೊಮ್ಮಗ. ಯಡಿಯೂರಪ್ಪ ರೈತರ ಪರ ಹೋರಾಟ ಮಾಡಿಕೊಂಡು ಬಂದವರು. ಮಂಡ್ಯದ ಮಣ್ಣಿನ ಪ್ರಭಾವದಿಂದ ಅವರಿಗೆ ಪ್ರೇರಣೆ ದೊರೆತು ಯಡಿಯೂರಪ್ಪ ಅವರು ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನ ಮಂತ್ರಿ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ೬ ಸಾವಿರ ರು. ಕೊಟ್ಟರು. ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ೪ ಸಾವಿರ ರು. ಸೇರಿಸಿ ರೈತರಿಗೆ ಕೊಟ್ಟರು. ಅದನ್ನು ಈಗಿನ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ರೈತ ವಿದ್ಯಾನಿಧಿಯನ್ನು ಸಹ ನಿಲ್ಲಿಸಿದೆ, ಇವೆಲ್ಲವೂ ರೈತ ವಿರೋಧಿ ನಡೆಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ:

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರೈತರ ಪರ ನಿರ್ಧಾರ ಮಾಡಿಲ್ಲ. ಬದಲಾಗಿ ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡಿದೆ. ಕಾವೇರಿ ನೀರನ್ನು ಹರಿಸಿ ತಮಿಳುನಾಡಿನ ಸ್ಟ್ಯಾಲಿನ್ ಅವರನ್ನು ಖುಷಿ ಪಡಿಸಲು ಸರ್ಕಾರ ಮುಂದಾಗಿದೆ. ಇದರಿಂದ ಕಾವೇರಿ ಕಣಿವೆ

ರೈತರು ಕಂಗಾಲಾಗಿದ್ದಾರೆ. ಮುಂದೆ ಭೀಕರ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಹದಿನಾರನೇ ಬಜೆಟ್ ಮಂಡನೆ ಮಾಡ್ತಿದ್ದಾರೆ. ಈಗಲಾದರೂ ರೈತರ ಪರವಾದ ಬಜೆಟ್ ಕೊಡಲಿ. ಅನ್ನದಾತರು ಭೀಕರ ಬರಗಾಲವನ್ನು ಎದುರು ನೋಡುತ್ತಿದ್ದಾರೆ. ಶುದ್ಧ ಕುಡಿಯುವ ನೀರನ್ನು ಕೊಡಬೇಕು. ಬಜೆಟ್ ರೈತರ ಪರವಾಗಿರಲಿ ಎಂದು ಆಗ್ರಹ ಮಾಡುವುದಾಗಿ ತಿಳಿಸಿದರು.

ಡಿಕೆಶಿ ಕ್ಷಮೆಯಾಚಿಸಲಿ:

ನಟ್ಟು, ಬೋಲ್ಟ್ ಡಿಕೆಶಿ ಹೇಳಿಕೆ ವಿಚಾರವಾಗಿ, ಡಿಕೆಶಿ ಅವರಿಗೆ ವಿನಮ್ರವಾಗಿ ಹೇಳುತ್ತೇನೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಯಾರೂ ನಿಮ್ಮ ಗುಲಾಮರಲ್ಲ. ಅಧಿಕಾರ ಶಾಶ್ವತ ಎನ್ನುವ ರೀತಿಯ ವರ್ತನೆ ಸರಿಯಲ್ಲ. ಭಂಡತನ ಬಿಟ್ಟು ತಪ್ಪಿಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡ ಎಸ್.ಸಚ್ಚಿದಾನಂದ, ಶಾಸಕ ಸತೀಶ್ ರೆಡ್ಡಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಮಹಿಳಾ ಮುಖಂಡೆ ಲಕ್ಷ್ಮೀ ಅಶ್ವಿನ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಅಶೋಕ್ ಜಯರಾಂ, ಶ್ರೀಧರ್, ಹೆಚ್.ಆರ್.ಅಶೋಕ್‌ಕುಮಾರ್, ಬೇವಿನಹಳ್ಳಿ ಮಹೇಶ್, ರಾಮಚಂದ್ರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ