ಕನ್ನಡಪ್ರಭ ವಾರ್ತೆ ರಾಮನಗರ
ಜಿಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ದಿನಾಚರಣೆ-2025ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು ಅರ್ಥ ಮಾಡಿಕೊಳ್ಳದ ಹೊರತು ನಮ್ಮ ಸಂವಿಧಾನ ಅರ್ಥವಾಗುವುದಿಲ್ಲ, ಸಂವಿಧಾನ ಎಂಬುದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕಾರ್ಯಕ್ರಮ, ಅದು ಅರ್ಥವಾಗಲು ಅದರ ಹಿನ್ನಲೆ, ಪ್ರಸ್ತುತತೆ ತಿಳಿದಿರಬೇಕು, ಸಂವಿಧಾನದ ಮೂಲಕ ತತ್ವಗಳೇ ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ದಿನನಿತ್ಯದ ಕೆಲಸಗಳನ್ನು ಮುನ್ನಡೆಸುವುದಾಗಿದೆ ಎಂದರು.
ಅಸಮಾನತೆ, ತಾರತಮ್ಯ, ಜಾತಿ ಇವುಗಳಿಂದ ತುಂಬಿದ್ದ ಅಂದಿನ ಭಾರತದ ವ್ಯವಸ್ಥೆಯಲ್ಲಿ ವರ್ಣ ಪದ್ಧತಿಗೆ ಹೆಚ್ಚಿನ ಮಹತ್ವವಿತ್ತು. ಈ ಅಸಮಾನತೆಗಳನ್ನು ಬಳಸಿಕೊಂಡು ಪರಕೀಯರು ಆಳ್ವಿಕೆ ನಡೆಸಿದರು. ನಂತರ ದೇಶದ ಸ್ವಾತಂತ್ರ್ಯಕ್ಕಾಗಿ ಮಾನ-ಪ್ರಾಣವನ್ನು ಒತ್ತೆಯಿಟ್ಟು ಲಕ್ಷಾಂತರ ಜನ ಹೋರಾಡಿದರು. ಇವೆಲ್ಲವೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ತಿಳಿದಿತ್ತು. ಸ್ವಾತಂತ್ರ ದೊರೆಯುವ ಸಂದರ್ಭದಲ್ಲಿ ರಚಿಸಲಾದ ಸಂವಿಧಾನ ರಚನಾ ಸಮಿತಿಗೆ ಚುನಾವಣೆಯೂ ನಡೆಸಲಾಗಿತ್ತು. ಆ ಚುನಾವಣೆಯಲ್ಲಿ ಗೆದ್ದವರಷ್ಟೇ ಸದಸ್ಯರಾಗಲು ಸಾಧ್ಯವಿತ್ತು. ಸಂವಿಧಾನ ರಚನೆಗಾಗಿ ಹಲವು ಉಪ ಸಮಿತಿಗಳು, ಕರಡು ರಚನಾ ಸಮಿತಿಗಳನ್ನು ರಚಿಸಲಾಗಿತ್ತು ಎಂದರು.1935ರ ಭಾರತ ಸರ್ಕಾರದ ಕಾಯ್ದೆ ಬ್ರಿಟಿಷ್ ಭಾರತಕ್ಕೆ ಸಂವಿಧಾನ ಚೌಕಟ್ಟನ್ನು ಸ್ಥಾಪಿಸಿದ ಮಹತ್ವದ ಕಾನೂನಾಗಿತ್ತು. ಅದರಲ್ಲಿನ ಬಹುತೇಕ ಅಂಶಗಳ ಆಧಾರದಲ್ಲಿಯೇ ಸಂವಿಧಾನ ರಚಿಸಲಾಯಿತು. ಹಗಲು ರಾತ್ರಿ ನಿದ್ರೆಗೆಟ್ಟು, ಆರೋಗ್ಯ ಸಮಸ್ಯೆ ಲೆಕ್ಕಿಸದೆ ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದರು ಎಂದು ಡಾ. ಕೃಷ್ಣಮೂರ್ತಿ ಚಮರಂ ಹೇಳಿದರು.
ಸಂವಿಧಾನ ಜಾಗೃತಿ ಜಾಥಾ:
ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಪಂ ಕಚೇರಿಯವರೆಗೆ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ಸಂವಿಧಾನ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಘೋಷಣೆಯೊಂದಿಗೆ ಸಾಗಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಗುರುಮೂರ್ತಿ, ಎಎಸ್ಪಿ ರಾಜೇಂದ್ರ, ಉಪವಿಭಾಗಾಧಿಕಾರಿ ಬಿನೋಯ್, ಜಿಪಂ ಉಪ ಕಾರ್ಯದರ್ಶಿ ಧನರಾಜ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸತೀಶ್, ಮುಖಂಡರಾದ ಚಲುವರಾಜು, ಕುಂಭಾಪುರ ಬಾಬು, ಮರಿಸ್ವಾಮಿ, ಶೇಖರ್, ಅಶೋಕ್, ಸಿದ್ದರಾಜು ಹಾಜರಿದ್ದರು.