ಧಾರವಾಡ: ದೇಶದಲ್ಲಿ ವಾಸಿಸುವ ಜನರಿಗೆ ಸಂವಿಧಾನ ಒಂದು ವರವಾಗಿ ದೊರೆತಿದೆ. ಆದರೆ, ಅದರ ಕುರಿತು ಸರಿಯಾದ ಜ್ಞಾನ ಸಮಾಜದ ಜನರಿಗಿಲ್ಲ. ಸಂವಿಧಾನವು ದೇಶದ ಪ್ರತಿಯೊಬ್ಬರ ಜೀವನಾಡಿಯಿದ್ದಂತೆ. ಅದರ ಕುರಿತು ಮಕ್ಕಳಿಗೆ ಬಾಲ್ಯದಿಂದಲೇ ತಿಳುವಳಿಕೆ ಮೂಡಿಸುವ ಕಾರ್ಯವನ್ನು ರಂಗಾಯಣ ಯಶಸ್ವಿಯಾಗಿ ಮಾಡಿದೆ ಎಂದು ಹಿರಿಯ ಚಿಂತಕ ಡಾ. ರಂಜಾನ ದರ್ಗಾ ಹೇಳಿದರು.
ಕೇವಲ 25 ದಿನಗಳಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಚಟುವಟಿಕೆಗಳನ್ನು ಕಲಿಸಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಪಾಲಕರು ಮಕ್ಕಳಿಗೆ ಈ ರೀತಿಯ ಶಿಬಿರಗಳಿಗೆ ಕರೆದುಕೊಂಡು ಹೋಗುವುದು ಕಾಣಸಿಗುವುದಿಲ್ಲ. ಆದರೆ, ಧಾರವಾಡದಲ್ಲಿ ರಂಗಾಯಣಕ್ಕೆ ಪ್ರತಿ ಪಾಲಕರು ಮಕ್ಕಳು ಏನನ್ನಾದರೂ ಕಲಿಯಲಿ ಎಂಬ ಭಾವನೆಯಿಂದ ಶಿಬಿರಕ್ಕೆ ಸೇರಿಸಿ, ಪ್ರೋತ್ಸಾಹ ನೀಡಿರುವುದು ಉತ್ತಮ ಸಂಗತಿ. ಇಂತಹ ಕಾರ್ಯಯೋಜನೆಗಳಿಂದ ರಂಗಾಯಣದ ಶಕ್ತಿ ಹಿರಿಯದಾಗಿದೆ ಎಂದು ಶ್ಲಾಘಿಸಿದರು.
ಕಲಾಸಂಗಮ ಅಧ್ಯಕ್ಷ ಡಾ. ಪ್ರಭು ಹಂಚಿನಾಳ ಮಾತನಾಡಿ, ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರತಂದು, ಅವರಲ್ಲಿರುವ ಕಲೆಗಳನ್ನು ಗುರುತಿಸಿ, ಅವರ ಸರ್ವಾಂಗೀಣ ಬೆಳವಣಿಗೆಗೆ ರಂಗಾಯಣ ಸಾಕ್ಷಿಯಾಗಿದೆ. ಮಕ್ಕಳಿಗೆ ಸಂಗೀತ, ನೃತ್ಯ, ಜನಪದ ಕಲೆಗಳ ಪರಿಚಯ, ಆರೋಗ್ಯದ ಕುರಿತು ಮನೆಮದ್ದಿನ ಉಪಯೋಗ, ಮಕ್ಕಳ ಹಕ್ಕುಗಳ ಕುರಿತು ಅರಿವು ಸೇರಿದಂತೆ ಹಲವಾರು ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ತಿಳುವಳಿಕೆಯನ್ನು ಈ ಶಿಬಿರದ ಮೂಲಕ ಮಾಡಲಾಗಿದೆ. ಎಲ್ಲ ಮಕ್ಕಳು ಆಸಕ್ತಿಯಿಂದ ಶಿಬಿರದಲ್ಲಿ ಭಾಗವಹಿಸಿ ಇಂದು ಅದ್ಭತ ಸಂದೇಶ ಸಾರುವಂತಹ ನಾಟಕಗಳನ್ನು ಪ್ರದರ್ಶಿಸಿದ್ದಾರೆ ಎಂದರು.ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಿಬಿರ ನಿರ್ದೇಶಕ ಲಕ್ಷ್ಮಣ ಪೀರಗಾರ ಇದ್ದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ವಂದಿಸಿದರು. ನಂತರ ಸಮಗ್ರತೆ ತಂಡದವರು ಕಂಸಾಳೆ ಪ್ರಸ್ತುತಪಡಿಸಿದರು. ಪ್ರಜಾಪ್ರಭುತ್ವ ತಂಡದವರು “ಮಕ್ಕಳ ರಾಜ್ಯ” ನಾಟಕವನ್ನು ಪ್ರದರ್ಶಿಸಿದರು. ಶಿಬಿರ ಗೀತೆ, ರಂಗಗೀತೆಗಳು, ಮಕ್ಕಳ ಹಾಡುಗಳು ಹಾಗೂ ಜಾನಪದ ನೃತ್ಯಗಳು ಜರುಗಿದವು.