- ಹರಿಹರದಲ್ಲಿ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್
ಕನ್ನಡಪ್ರಭ ವಾರ್ತೆ ಹರಿಹರ
ನಮ್ಮ ದೇಶ ಅತಿ ದೊಡ್ಡ ಜನಸಂಖ್ಯೆ ಹೊಂದಿದ್ದರೂ ಶಾಂತಿ, ನೆಮ್ಮದಿ, ಸಾಮರಸ್ಯದಿಂದ ಬದುಕಲು ಕಾರಣವಾಗಿರುವುದು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ನಗರದ ಗುರುಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ನಗರಸಭೆ, ವಿವಿಧ ಇಲಾಖೆಗಳು ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬುಧವಾರ ನಡೆದ ಸಂವಿಧಾನ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶ ಅನೇಕ ಜಾತಿ, ಧರ್ಮ, ಮತ, ಪಂಥ ಹಾಗೂ ಮಲೆನಾಡು, ಮರಳುಗಾಡು, ಕರಾವಳಿ ಹೀಗೆ ವಿವಿಧ ಬಿನ್ನತೆ ಹೊಂದಿದೆ. ಹೀಗಿದ್ದರೂ ಅವೆಲ್ಲವನ್ನು ಒಟ್ಟುಗೂಡಿಸಿ ಎಲ್ಲರಿಗೂ ಸಮಾನ ಬದುಕು ಕಟ್ಟಿಕೊಳ್ಳಲು ಕಾರಣ ಆಗಿರುವುದು ಸಂವಿಧಾನ. ಅನೇಕ ದೇಶಗಳಲ್ಲಿ ಅನೇಕ ಸಮಸ್ಯೆಗಳು ಇವೆ. ಅಂಥ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವಂಥ ಸಂವಿಧಾನ ನೀಡಿರುವುದು ಅಂಬೇಡ್ಕರ್. ಅವರನ್ನು ನಾವು ಸ್ಮರಿಸಬೇಕಿದೆ ಎಂದರು.ತಹಸೀಲ್ದಾರ್ ಹಾಗೂ ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಕೆ.ಎಂ. ಗುರುಬಸವರಾಜ ಮಾತನಾಡಿ, ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಲಿಖಿತ ಸಂವಿಧಾನ ನೀಡಿದ್ದು, ವಿಶ್ವ ಕಂಡ ಅತ್ಯಂತ ಜ್ಞಾನಿ ಡಾ.ಅಂಬೇಡ್ಕರ್. ಆರ್ಥಿಕತೆ, ಜಾತಿ, ಸ್ವಾತಂತ್ರ್ಯ, ಒಕ್ಕೂಟ ವ್ಯವಸ್ಥೆಯ ಅಂಶಗಳನ್ನು ಸೇರಿಸಿ ಸಂವಿಧಾನ ರಚಿಸಿದ್ದ ಅವರು 32 ಡಿಗ್ರಿಗಳನ್ನು ಹೊಂದಿದ್ದರು. ಸದೃಢ, ಭವ್ಯ ಭಾರತದ ಪರಿಕಲ್ಪನೆಯ ಕನಸು ಕಂಡಿದ್ದರು ಎಂದರು.
ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆ ಮುಖ್ಯೋಪಧ್ಯಾಯ ಬಿ.ಬಿ.ರೇವಣ ನಾಯ್ಕ ವಿಶೇಷ ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ನಗರದ ಹರಿಹರೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಿಂದ ಗುರುಭವನದ ವರೆಗೆ ಮೆರವಣಿಗೆ, ಸಂವಿಧಾನ ಪೀಠಿಕೆ ವಾಚನ ನಡೆಯಿತು.ಇದೇ ಸಂದರ್ಭ ಇತ್ತೀಚೆಗೆ ಅಗಲಿದ ಸಾಲು ಮರದ ತಿಮ್ಮಕ್ಕ ಹಾಗೂ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಮಹಂತೇಶ್ ಬೀಳಗಿ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಬಸವರಾಜ, ಆರಕ್ಷಕ ನಿರೀಕ್ಷಕ ಆರ್.ಎಫ್. ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಡಿ.ನಗರಸಭೆ ಪೌರಯುಕ್ತ ನಾಗಣ್ಣ ಎಂ.ಪಿ., ಸ.ಕ.ಇ. ಸಹಾಯಕ ನಿರ್ದೇಶಕ ಹನುಮಂತಪ್ಪ ಟಿ.ಲಮಾಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ್ ಮಹಾಂತೇಶ, ನಗರಸಭೆ ಮಾಜಿ ಸದಸ್ಯ ಆಟೋ ಹನುಮಂತಪ್ಪ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.- - -
(ಕೋಟ್) ಉತ್ತಮ ನೌಕರಿ ನೀಡಿದ ಸಂವಿಧಾನದ ಕಾರ್ಯಕ್ರಮಗಳಲ್ಲಿ ಗೈರಾಗದೇ ಎಲ್ಲ ಅಧಿಕಾರಿಗಳು ಭಾಗವಹಿಸಬೇಕು. ಇಲ್ಲದಿದ್ದಲ್ಲಿ ಅದು ಸಂವಿಧಾನಕ್ಕೆ ಮಾಡಿದ ಅಪಚಾರ ಆಗುತ್ತದೆ.- ಬಿ.ಪಿ. ಹರೀಶ್, ಶಾಸಕ.
- - -26 ಎಚ್ ಆರ್ ಆರ್ 01 ,01a
ನಗರದ ಗುರುಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ ನಗರಸಭೆ, ವಿವಿಧ ಇಲಾಖೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಹರಿಹರ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.