ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟಸ್ಥಾನ ಪಡೆದಿದ್ದು ಹಲವು ದಾಖಲೆಗಳಿಗೆ ಪಾತ್ರವಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಂತಹ ನೂರಾರು ಜಾತಿ, ಹತ್ತಾರು ಧರ್ಮ, ವೈವಿದ್ಯಮಯವಾದ ಸಂಸ್ಕೃತಿ, ಆಚರಣೆಗಳಿಂದ ಕೂಡಿರುವ ದೇಶಕ್ಕೆ ಸಂವಿಧಾನವನ್ನು ರೂಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಅಂತಹ ಮಹತ್ತರವಾದ ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.ಸಂವಿಧಾನ ಕೇವಲ ಒಂದು ಪುಸ್ತಕವಲ್ಲ, ಇದು ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ ಆಧಾರದಡಿಯಲ್ಲಿ ನಿರ್ಮಿಸಿದ ವಾಗ್ದಾನವಾಗಿದೆ. ಯಾವುದೇ ಧರ್ಮ, ಅಥವಾ ಜಾತಿಗೆ ಸೀಮಿತಗೊಳಿಸದೇ ಎಲ್ಲರಿಗೂ ಒಂದೇ ಸೂರಿನಡಿನಡಿಯಲ್ಲಿ ಸಮಾನತೆ, ಗೌರವ ಮತ್ತು ನ್ಯಾಯ ದೊರಕಿಸುವ ಉದ್ದೇಶ ಅಡಗಿದೆ. ಸದ್ಯ ಇಂತಹ ಶ್ರೇಷ್ಠ ಸಂವಿಧಾನ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸ ಬಸವರಾಜ ಜಾಲವಾದಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ಕೀರ್ತಿ ಚಾಲಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಸಂತಿ ಮಠ, ಬಿಸಿಎಂ ಸವಿತಾ ಕೊಣ್ಣೂರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ರಾಯನಗೌಡ ತಾತರಡ್ಡಿ, ರಾಮಣ್ಣ ರಾಜನಾಳ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಶಿವು ಶಿವಪೂರಿ, ತಿಪ್ಪಣ್ಣ ದೊಡಮನಿ, ಪ್ರಕಾಶ ಸರೂರ ಸೇರಿದಂತೆ ಹಲವರು ಇದ್ದರು. ಶಿಕ್ಷಕ ಟಿ.ಡಿ.ಲಮಾಣಿ ನಿರೂಪಿಸಿದರು.ಧರ್ಮ ಧರ್ಮಗಳಲ್ಲಿ ಪ್ರತ್ಯೇಕತೆ ಹೆಚ್ಚಾಗುತ್ತಿದೆ. ದೇಶದಲ್ಲಿ ರಾಜ್ಯ, ರಾಜ್ಯಗಳ ಮಧ್ಯ ಪ್ರಾಂತಿಯ ವೈಷಮ್ಯಗಳು ಸಂವಿಧಾನದ ಏಕತೆಗೆ ಧಕ್ಕೆಯನ್ನುಂಟು ಮಾಡುವ ಸಂದರ್ಭಗಳನ್ನು ಎದುರಿಸಬೇಕಾಗಿದೆ. ಹೀಗಾದಾಗ ಸಂವಿಧಾನಕ್ಕೆ ಹೇಗೆ ಗೌರವ ತರಲು ಸಾಧ್ಯ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಲ್ಲಿ ಗುಣಮಟ್ಟ ಶಿಕ್ಷಣದ ಜತೆಗೆ ಮಾನವಿಯ ಮೌಲ್ಯ ಶ್ರೇಷ್ಠ ಸಂವಿಧಾನದ ಕುರಿತು ತತ್ವ ಬೋಧನೆ ನೀಡಿ ದೇಶದ ಉನ್ನತಿಗೆ ಮತ್ತು ಪ್ರಗತಿಗೆ ಶ್ರಮಿಸುವುದರ ಜತೆಗೆ ದೇಶಾಭಿಮಾನ ರೂಢಿಸಿಕೊಳ್ಳುವಂತೆ ಮಾಡಬೇಕಿದೆ.
-ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕರು.