ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ನಡೆದ ವಕೀಲರ ದಿನಾಚರಣೆ, ದಿನಚರಿ ಬಿಡುಗಡೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಸುಸರ್ಜಿತ ನ್ಯಾಯಾಲಯ ಕಟ್ಟಡವಿದೆ. ಆದರೆ, ಮಳವಳ್ಳಿಯಲ್ಲಿ ಸ್ಥಳ ನಿಗಧಿಯಾಗಿದ್ದರೂ ಕೂಡ ವ್ಯಕ್ತಿಯೊಬ್ಬರ ದೂರಿನಿಂದ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಕ್ಕಿರಲ್ಲಿಲ್ಲ ಎಂದರು.
ಸದ್ಯಕ್ಕೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ. ನ್ಯಾಯಾಧೀಶರು, ಸಾರ್ವಜನಿಕರು, ವಕೀಲರ ಸಂಘಕ್ಕೆ ಅನುಕೂಲವಾಗುವಂತೆ ಸುಸರ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.ನ್ಯಾಯಾಲಯ ಕಟ್ಟಡ ನಿರ್ಮಾಣ ಸೇರಿದಂತೆ ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಮಂತ್ರಿಯಾಗಲಿ ಎಂದು ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿಗೆ ಹರಕೆ ಕಟ್ಟಿಕೊಳ್ಳುತ್ತೇನೆ. ಮಂತ್ರಿಯಾದರೇ ಖುದ್ದಾಗಿ ನಮ್ಮ ಮನೆದೇವರಿಗೆ ಹೋಗಿ ಹರಕೆ ತೀರುಸುತ್ತೇನೆ. ಜೊತೆಗೆ ಸಚಿವ ಚಲುವರಾಯಸ್ವಾಮಿ ಅವರಿಗೂ ನರೇಂದ್ರಸ್ವಾಮಿ ಅವರನ್ನು ಮಂತ್ರಿ ಮಾಡಿ ಎಂದು ಕೇಳಿಕೊಂಡಿದ್ದೇನೆ ಎಂದರು.
ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ವಕೀಲರು ಗೌರವ ನೀಡಬೇಕು, ನ್ಯಾಯಾಲಯದ ಸಂಬಂಧಿಸಿದ ವಿಷಯಗಳ ಬಗ್ಗೆ ಸತ್ಯವನ್ನು ಹೇಳಬೇಕು, ಗ್ರಾಮೀಣ ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ವಕೀಲರ ಸಂಘದ ಜನಪರವಾಗಿ ಮುಂದುವರಿಯಲಿ ಎಂದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಭೃಂಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಕೀಲರು ತೀರ್ಪುಗಳನ್ನು ಓದಬೇಕು. ಇದರಿಂದ ಭಾಷೆಯಲ್ಲಿ ಹಿಡಿತ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ತಿಳಿಯುತ್ತವೆ. ನ್ಯಾಯಾಲದ ಕಟ್ಟಡ ನಿರ್ಮಾಣಕ್ಕೆ ಉಚ್ಚನ್ಯಾಯಾಲಯದ ನ್ಯಾಯಾಮೂರ್ತಿಗಳ ಸಲಹೆ ಸಹಕಾರದೊಂದಿಗೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಕೀಲರ ಸಂಘದಿಂದ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ನ್ಯಾಯಾಲಯದ ಕಟ್ಟಡ ನಿರ್ಮಾಣ ಸಂಬಂಧ ಶಾಸಕರು ಹಾಗೂ ನ್ಯಾಯಾಧೀಶರ ವಿಶ್ವಾಸದೊಂದಿಗೆ ಸಮಸ್ಯೆ ಬಗೆಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್.ಎಲ್.ವಿಶಾಲ್ ರಘು, ಪರಿಷತ್ ಸದಸ್ಯರಾದ ಎನ್. ಶಿವಕುಮಾರ್, ಮಳವಳ್ಳಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಮಹೇದ್ರ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಚಿನ್‌ಕುಮಾರ್ ಶಿವಪೂಜಿ, ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ಎಚ್.ಎಸ್ ಕಾವ್ಯಶ್ರೀ ತಹಸೀಲ್ದಾರ್ ಡಾ. ಎಸ್.ವಿ ಲೊಕೇಶ್, ಡಿವೈಎಸ್ಪಿ ವಿ.ಕೃಷ್ಣಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.