ಕನ್ನಡಕ್ಕೆ ಆಟೋ ಚಾಲಕರ ಕೊಡುಗೆ ಅಪಾರ

KannadaprabhaNewsNetwork | Published : Dec 15, 2024 2:00 AM

ಸಾರಾಂಶ

ಇವತ್ತು ಕನ್ನಡ ಉಳಿಬೇಕು, ಬೆಳಿಬೇಕು ಎಂದರೆ ಅದು ನಮ್ಮ ಆಟೋ ಚಾಲಕರಿಂದ ಸಾಧ್ಯ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳಿದ್ದಾರೆ.

- ಶಾಲಾ ಆಟೋ, ವ್ಯಾನ್ ರ‍್ಯಾಲಿಗೆ ಚಾಲನೆ ನೀಡಿ ಶ್ರೀನಿವಾಸ ದಾಸಕರಿಯಪ್ಪ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಇವತ್ತು ಕನ್ನಡ ಉಳಿಬೇಕು, ಬೆಳಿಬೇಕು ಎಂದರೆ ಅದು ನಮ್ಮ ಆಟೋ ಚಾಲಕರಿಂದ ಸಾಧ್ಯ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.

ನಗರದ ಹೈಸ್ಕೂಲ್ ಮೈದಾನ ಆವರಣದಲ್ಲಿ ಶನಿವಾರ ಜಿಲ್ಲಾ ಶಾಲಾ ಆಟೋ ಮತ್ತು ವ್ಯಾನ್ ಚಾಲಕರ ಸಂಘದಿಂದ ನಡೆದ 5ನೇ ವರ್ಷದ ಶಾಲಾ ಆಟೋ, ವ್ಯಾನ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋಟಿ ರೂಪಾಯಿ ಕೊಟ್ಟು ದೊಡ್ಡ ದೊಡ್ಡ ಕಂಪನಿಯ ಕಾರುಗಳನ್ನು ಖರೀದಿಸಿದವರು ಆಂಗ್ಲಭಾಷೆಯಲ್ಲಿ ಹೆಸರುಗಳನ್ನು ಕಾರುಗಳ ಮೇಲೆ ಬರೆಸಿಕೊಳ್ಳುತ್ತಾರೆ. ಲಕ್ಷ ರು. ಕೊಟ್ಟು ಆಟೋ ಖರೀದಿಸಿದ ನೀವು ಕನ್ನಡದಲ್ಲಿ ಹೆಸರುಗಳನ್ನು ಬರೆಸುತ್ತೀರಿ. ಕನ್ನಡ ಭಾಷೆ ಉಳಿಯಬೇಕಾಗಿರುವುದು, ಉಳಿದಿರುವುದು ನಿಮ್ಮಿಂದ. ಇದರ ಜೊತೆಗೆ ಇಂದು ನೀವು ಜೀವ ಉಳಿಸುವಂತಹ ರಕ್ತವನ್ನು ದಾನ ಮಾಡುವಂತಹ ಸತ್ಕಾರ್ಯವನ್ನು ನೀವು ಮಾಡುತ್ತಿದ್ದೀರಿ ಎಂದು ಶ್ಲಾಘಿಸಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಕನ್ನಡ ರಾಜ್ಯೋತ್ಸವ ಹಬ್ಬವನ್ನು ನಾವು ಬರೀ ನವೆಂಬರ್ 1ಕ್ಕೆ, ಅಥವಾ ನವೆಂಬರ್ ತಿಂಗಳಲ್ಲಿ ಮಾತ್ರ ಮಾಡುತ್ತಿದ್ದೆವು. ಈಗ ಡಿಸೆಂಬರ್ ತಿಂಗಳಿಗೂ ಬಂದಿದೆ. ಇದು ಬರೀ ಒಂದು ದಿನಕ್ಕೆ, ಒಂದು ತಿಂಗಳಿಗೆ ಸೀಮಿತವಾಗದೇ ನಿತ್ಯೋತ್ಸವದ ಹಬ್ಬವಾಗಬೇಕು ಎಂದರು.

ನಿಮ್ಮ ಸಂಘದ್ದೇ ಒಂದು ಸಹಕಾರಿ ಬ್ಯಾಂಕು ಆದರೆ ಬಹಳ ಒಳ್ಳೆಯದು. ಇದು ತುಂಬಾ ಒಳ್ಳೆಯ ಕೆಲಸ. ಬಡ ಆಟೋ ಚಾಲಕರು ಖಾಸಗಿ ಬ್ಯಾಂಕು, ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿ ಮೀಟರ್ ಬಡ್ಡಿ ಕಟ್ಟಲಾಗದೇ ಮನೆತನ ನಡೆಸಲೂ ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ನಾನೂ ಕೆಲವರಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲವನ್ನು ಕೊಡಿಸಿದ್ದೇನೆ. ಅವರು ಪ್ರಾಮಾಣಿಕವಾಗಿ ಮರು ಪಾವತಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ವಿ.ಮಂಜುನಾಥ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಮಂಜುನಾಥ, ಸಂಚಾರಿ ಪೊಲೀಸ್ ಇನ್‌ಸ್ಪೆಕ್ಟರ್ ಶೈಲಜ, ಡಾ.ದಿವ್ಯಾ, ಗಂಗಾಧರ, ರುದ್ರಸ್ವಾಮಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಇತರರು ಭಾಗವಹಿಸಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಶಾಲಾ ಆಟೋ, ವ್ಯಾನ್‌ಗಳ ರ‍್ಯಾಲಿ ನಡೆಯಿತು. ಮಧ್ಯಾಹ್ನ ರಕ್ತದಾನ ಶಿಬಿರ ನಡೆಯಿತು.

- - - -14ಕೆಡಿವಿಜಿ37, 38:

ದಾವಣಗೆರೆಯಲ್ಲಿ ನಡೆದ ಶಾಲಾ ಆಟೋ, ವ್ಯಾನ್ ರ‍್ಯಾಲಿಗೆ ಶ್ರೀನಿವಾಸ ದಾಸಕರಿಯಪ್ಪ ಚಾಲನೆ ನೀಡಿದರು.

Share this article