ಹಳ್ಳಿಖೇಡ ಪಾಳು ಯಾತ್ರಿ ನಿವಾಸಕ್ಕೆಂದು ಮುಕ್ತಿ?

KannadaprabhaNewsNetwork | Published : Dec 15, 2024 2:00 AM

ಸಾರಾಂಶ

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಆರ್‌ಐಡಿಎಲ್‌ ಇಲಾಖೆಯಲ್ಲಿ ನಿರ್ವಹಣೆಯಲ್ಲಿರುವ 1 ಕೋಟಿ ರು. ವೆಚ್ಚದ ಹಳ್ಳಿಖೇಡ್‌ (ಬಿ) ಪಟ್ಟಣದ ಯಾತ್ರಿ ನಿವಾಸಕ್ಕೆ 7 ವಸಂತಗಳು ಗತಿಸಿದರೂ ಪೂರ್ಣಗೊಳ್ಳದೇ ಪಾಳು ಬಿದ್ದಿದೆ.

ಕನ್ನಡಪ್ರಭ ವಾರ್ತೆ, ಹುಮನಾಬಾದ್‌

ಬಸವಕಲ್ಯಾಣ ಸಹಾಯಕ ಆಯುಕ್ತರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಆರ್‌ಐಡಿಎಲ್‌ ಇಲಾಖೆಯಲ್ಲಿ ನಿರ್ವಹಣೆಯಲ್ಲಿರುವ 1 ಕೋಟಿ ರು. ವೆಚ್ಚದ ಹಳ್ಳಿಖೇಡ್‌ (ಬಿ) ಪಟ್ಟಣದ ಯಾತ್ರಿ ನಿವಾಸಕ್ಕೆ 7 ವಸಂತಗಳು ಗತಿಸಿದರೂ ಪೂರ್ಣಗೊಳ್ಳದೇ ಪಾಳು ಬಿದ್ದಿದೆ.2016-17ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರದಲ್ಲಿ ಕೆಆರ್‌ಐಡಿಎಲ್‌ ಅಧ್ಯಕ್ಷರಾಗಿದ್ದ ಈ ಕ್ಷೇತ್ರದ ಮಾಜಿ ಶಾಸಕ ರಾಜಶೇಖರ ಬಿ.ಪಾಟೀಲ್‌ ಅವರು, ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಹೊರವಲಯದ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಸೀಮಿ ನಾಗನಾಥ ದೇವಸ್ಥಾನಕ್ಕೆ ನಿತ್ಯ ಬರುವ ಭಕ್ತರ ಹಾಗೂ ಪ್ರತಿ ಶನಿವಾರ ನಾಗದೋಷ ಪೂಜೆಗೆ ಬರುವ ಭಕ್ತರ ವಸತಿಯ ಅನುಕೂಲದಿಂದ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ ಅಂದಿನ ಪ್ರವಾಸೋದ್ಯಮ ಖಾತೆ ಸಚಿವರ ಮೇಲೆ ಒತ್ತಡ ಹೇರಿ ಸುಕ್ಷೇತ್ರ ಸೀಮಿ ನಾಗಣ್ಣ ದೇವಸ್ಥಾನಕ್ಕೆ 10 ಕೋಣೆಗಳ ಒಳಗೊಂಡ 1 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಯಾತ್ರಿ ನಿವಾಸ ಅಡಿಗಲ್ಲು ಮಾಡಿದ ಬಳಿಕ 7 ರ್ಷಗಳು ಗತಿಸಿದರೂ ಪೂಣಗೊಳ್ಳದೇ ಪ್ರವಾಸಿಗಳ ಪ್ರಯೋಜನಕ್ಕೆ ಬಾರದಂತೆ ಇನ್ನೂ ಪಾಳು ಬಿದ್ದಿದೆ.ಪ್ರವಾಸಿಗರ ಹೆಚ್ಚಳ: ಶ್ರೀ ಕ್ಷೇತ್ರ ಸೀಮಿ ನಾಗನಾಥ ಕ್ಷೇತ್ರಕ್ಕೆ ಪ್ರತಿ ಶನಿವಾರ ನಾಗಧೂಷ ಪೂಜೆಗೆ ನೂರಾರು ಭಕ್ತರು ಭೇಟಿ ನೀಡಿ, ಸ್ವಾಮಿಗೆ ವಿವಿಧ ಪೂಜೆ, ಹರಕೆ ಸಲ್ಲಿಸುತ್ತಾರೆ. ಪ್ರತಿ ವರ್ಷದ ಶ್ರಾವಣ ಮಾಸದ ನಾಗರ ಪಂಚಮಿ ಹಾಗೂ ಕಾರ್ತಿಕ ಮಾಸದ ಗೌರಿ ಹುಣಿಮೆಯ ಸಮೀಪದ ಶನಿವಾರ ಎರಡು ಬಾರಿ ನಡೆಯಲಿರುವ ಜಾತ್ರಾ ಮೋಹತ್ಸವದಲ್ಲಿ ಸಹಸ್ರಾರು ಭಕ್ತರು ಕ್ಷೇತ್ರದಲ್ಲೇ ಉಳಿದು, ವಿಶೇಷ ಪೂಜಾ ಕೈಕಾರ್ಯಗಳ ಸೇವೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಅಲ್ಲದೆ ವರ್ಷಪೂರ್ತಿ ಮದುವೆ, ತೊಟ್ಟಿಲು, ಜಾವಳ, ಜಂಗಮ ದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗುತ್ತದೆ. ದೇವಸ್ಥಾನಕ್ಕೆ ಸಂಬಂಧಿಸಿದ ಟ್ರಸ್ಟಿನಿಂದ ಶನಿವಾರ ಹಾಗೂ ಅಮಾವಾಸ್ಯೆ ದಿವಸ ದಾಸೋಹ ಕೂಡ ನಡೆಯುವುದರಿಂದ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಅಲ್ಲದೆ ಜಾತ್ರಾ ಮಹೋತ್ಸವ ಸಮಯದಲ್ಲಿ ಅಂತರ ರಾಜ್ಯ ವಾಲಿಬಾಲ್‌ ಕ್ರೀಡೆ ಪ್ರತಿ ವರ್ಷ ಜರುಗಲಿದ್ದು, ಕ್ರೀಡಾಪಟುಗಳಿಗೆ ವಾಸ್ತವ್ಯಕ್ಕಾಗಿ ಬೀದರ್‌ ಹುಮನಾಬಾದ್‌ ಸೇರಿದಂತೆ ಲಾಡ್ಜ್‌ಗಳಲ್ಲಿ ತಂಗಬೇಕು. ಇದರಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕಾಗುತ್ತಿದೆ. ಕಟ್ಟಡವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಕಟ್ಟಡದ ಪರಿಸರ ಹಾಳಾಗಿದೆ, ಕಟ್ಟದ ಮೇಲ್ಛಾವಣೆಯ ಬೀಮ್‌ ಸೇರಿದಂತೆ ಕಟ್ಟಡದ ಬಹುತೇಕ ಭಾಗಗಳು ಬಿರುಕು ಬಿಟ್ಟಿದೆ. ಸುತ್ತಲೂ ಪ್ರದೇಶದಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಶಿಥಿಲಾವಸ್ಥೆ ತಲುಪುವ ಸಾಧ್ಯತೆ ಅಧಿಕವಾಗಿದೆ. ರಾತ್ರಿ ವೇಳೆ ಪುಂಡಪೋಕರಿಗಳ ತಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ. ಕೂಡಲೇ ಯಾತ್ರಿ ನಿವಾಸ ಉದ್ಘಾಟಿಸಿ. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಾನೀಯರು ನಿರೀಕ್ಷೆಯಾಗಿದೆ.

ವರ್ಷದ ಜಾತ್ರಾ ಮಹೋತ್ಸವದಲ್ಲಿ ಕ್ರೀಡಾಪಟುಗಳಿಗೆ ವಸತಿ ಸೌಲಭ್ಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಯಾತ್ರಿ ನಿವಾಸ ಪೂರ್ಣಗೊಂಡಲ್ಲಿ ಈ ಹಣ ದೇವಸ್ಥಾನದ ಇನ್ಯಾವುದಾದರೂ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು ಎಂದು ಹಳ್ಳಿಖೇಡ (ಬಿ) ನಿವಾಸಿ ಪ್ರಕಾಶ ತಿಬ್ಬಶಟ್ಟಿ ಹೇಳಿದರೆ, ದೇವಸ್ಥಾನಕ್ಕೆ ಬರುವ ಭಕ್ತರು ಹುಮನಾಬಾದ್‌, ಬೀದರ್‌ ಇತರೆ ಭಾಗಗಳಲ್ಲಿ ವಸತಿ ಮಾಡಿಕೊಂಡು ಬೆಳಿಗ್ಗೆ ಪೂಜೆಗೆ ಬರಲು ನರಕಯಾತನೆ ಪಡಬೇಕಾಗುತ್ತಿದೆ. ಯಾತ್ರಿ ನಿವಾಸ ನಿರ್ಮಾಣಗೊಂಡಲ್ಲಿ ಅನೇಕ ಭಕ್ತರಿಗೆ ಅನುಕೂಲವಾಗಲಿದೆ ಎಂದು ಸ್ಥಾನೀಯ ನಿವಾಸಿ ಅರುಣಕುಮಾರ ಬಾವಗಿ ಹೇಳಿದರು.

Share this article