ದೇಶದ ಆರ್ಥಿಕತೆಗೆ ಕಟ್ಟಡ ಕಾರ್ಮಿಕರ ಕೊಡುಗೆ ಅಪಾರ: ಹಿರಣ್ಮಯಿ ಪಾಂಡ್ಯ

KannadaprabhaNewsNetwork | Published : Mar 9, 2025 1:45 AM

ಸಾರಾಂಶ

ಸಂಘನಿಕೇತನದಲ್ಲಿ ಶನಿವಾರ ಬಿಎಂಎಸ್ ಸಂಯೋಜಿತ ಅಖಿಲ ಭಾರತೀಯ ಕನ್‌ಸ್ಟ್ರಕ್ಷನ್ ಮಜ್ದೂರ್ ಮಹಾ ಸಂಘದ ಎರಡು ದಿನಗಳ ೯ನೇ ತ್ರೈ ವಾರ್ಷಿಕ ಅಧಿವೇಶನ ಉದ್ಘಾಟನೆ ನಡೆಯಿತು. ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಅಧ್ಯಕ್ಷ ಹಿರಣ್ಮಯಿ ಪಾಂಡ್ಯ ಉದ್ಘಾಟಿಸಿದರು.

ಮಂಗಳೂರಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ 2 ದಿನಗಳ ರಾಷ್ಟ್ರೀಯ ಸಮಾವೇಶ

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತ ದೇಶ ಇಂದು ಆರ್ಥಿಕವಾಗಿ ಬಲಾಢ್ಯವಾಗುತ್ತಿದ್ದು, ದೇಶದ ಆರ್ಥಿಕತೆಗೆ ಕಟ್ಟಡ ನಿರ್ಮಾಣ ಕಾರ್ಮಿಕರ ಕೊಡುಗೆ ಮಹತ್ತರವಾದುದು ಎಂದು ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಅಧ್ಯಕ್ಷ ಹಿರಣ್ಮಯಿ ಪಾಂಡ್ಯ ಹೇಳಿದರು.

ನಗರದ ಸಂಘನಿಕೇತನದಲ್ಲಿ ಶನಿವಾರ ಬಿಎಂಎಸ್ ಸಂಯೋಜಿತ ಅಖಿಲ ಭಾರತೀಯ ಕನ್‌ಸ್ಟ್ರಕ್ಷನ್ ಮಜ್ದೂರ್ ಮಹಾ ಸಂಘದ ಎರಡು ದಿನಗಳ ೯ನೇ ತ್ರೈ ವಾರ್ಷಿಕ ಅಧಿವೇಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಮುಖ ಭಾಷಣ ಮಾಡಿದರು.ಬಿಎಂಎಸ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ಪ್ರಸ್ತುತ ಸಂಘಟಿತರಾಗುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರ ಸಹಿತ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಇ ಶ್ರಮ್ ಯೋಜನೆಗೆ ನೋಂದಣಿ ಮಾಡಿಕೊಂಡು ಎಲ್ಲ ಕಟ್ಟಡ ಕಾರ್ಮಿಕರು ಯೋಜನೆಯ ಪ್ರಯೋಜನ ಪಡೆಯಬೇಕು. ಕನಿಷ್ಠ ವೇತನ ಸಹಿತ ಕಾರ್ಮಿಕರಿಗೆ ಕೇಂದ್ರ- ರಾಜ್ಯ ಸರ್ಕಾರಗಳಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲು ಬಿಎಂಎಸ್ ಶ್ರಮಿಸುತ್ತಿದೆ. ಬಿಎಂಎಸ್ ಇಂದು ದೇಶದ ನಂ.೧ ಕಾರ್ಮಿಕ ಸಂಘಟನೆಯಾಗಿದೆ ಎಂದರು.ಕಟ್ಟಡ ಕಾರ್ಮಿಕರಿಗೆ ವೃತ್ತಿ ಕ್ಷೇತ್ರದಲ್ಲಿ ಕೌಶಲ್ಯ ಅತ್ಯಗತ್ಯವಾಗಿದೆ. ವೃತ್ತಿ ಕೌಶಲ್ಯ ಹಾಗೂ ಮಾರ್ಗದರ್ಶನ ನೀಡುವಲ್ಲಿ ಕನ್‌ಸ್ಟ್ರಕ್ಷನ್ ಮಜ್ದೂರ್ ಮಹಾ ಸಂಘದ ತ್ರೈ ವಾರ್ಷಿಕ ಅಧಿವೇಶನ ನೆರವಾಗಲಿದೆ. ನಿರ್ಮಾಣ ಕ್ಷೇತ್ರವೂ ಇಂದು ಘನತೆಯ ಉದ್ಯೋಗವಾಗಿದೆ ಎಂದರು.ಅಖಿಲ ಭಾರತೀಯ ಕನ್‌ಸ್ಟ್ರಕ್ಷನ್ ಮಜ್ದೂರ್ ಮಹಾಸಂಘದ ಅಧ್ಯಕ್ಷ ಮುರಾರಿ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಭಾರತೀಯ ಅಸಂಘಟಿತ ಕ್ಷೇತ್ರ ಪ್ರಭಾರಿ ಜಯಂತಿಲಾಲ್, ಉದ್ಯೋಗ ಪ್ರಭಾರಿ ಜಯಂತ ದೇಶಪಾಂಡೆ, ಮಹಾ ಸಂಘ ಪ್ರಧಾನ ಕಾರ್ಯದರ್ಶಿ ಜಂಗಬಹದ್ದೂರ್ ಸಿಂಗ್, ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಪದ್ಮಾವತಿ ಅತಿಥಿಗಳಾಗಿದ್ದರು.

ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಪ್ರಾಂತ ಅಧ್ಯಕ್ಷ ಎನ್.ಕೆ. ಪ್ರಕಾಶ, ಪ್ರಧಾನ ಕಾರ್ಯದರ್ಶಿ ಎಚ್. ವಿಶ್ವನಾಥ, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಪ್ರಾಂತ ಅಧ್ಯಕ್ಷ ಚಿಂತಾಮಣಿ ಕೋಡಿಹಳ್ಳಿ, ಪ್ರಧಾನ ಕಾರ್ಯದರ್ಶಿ ಸುರೇಶ ನಾಡಗೇರ ಇದ್ದರು.

ದೇಶದ ೨೫ ರಾಜ್ಯಗಳ ಸುಮಾರು ೫೦೦ ಮಂದಿ ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ.----------------

Share this article