ಟಿಪ್ಪರ್ ಲಾರಿಗಳ ಹುಚ್ಚಾಟ ತಡೆಯುವಲ್ಲಿ ಸಾರಿಗೆ ಇಲಾಖೆ ವಿಫಲ

KannadaprabhaNewsNetwork | Published : Mar 9, 2025 1:45 AM

ಸಾರಾಂಶ

ತಾಲೂಕಿನಲ್ಲಿ ಹಲವು ಅಪಘಾತಗಳಿಗೆ ಕಾರಣವಾಗುತ್ತಿರುವ ಟಿಪ್ಪರ್‌ ಲಾರಿಗಳ ಹುಚ್ಚಾಟ ನಿಯಂತ್ರಿಸುವಲ್ಲಿ ಸಾರಿಗೆ ಇಲಾಖೆ ವಿಫಲವಾಗುತ್ತಿದೆ ಎಂದು ಅಪಾದಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಇಲ್ಲಿನ ಡಾ,ರಾಜ್‌ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಬೆಳಗ್ಗೆ 10 ಗಂಟೆಗೆ ಪಾರಂಭವಾದ ಪ್ರತಿಭಟನೆಯಿಂದ ವೃತ್ತದ ಮೂರೂ ಕಡೆಯ ರಸ್ತೆಗಳಲ್ಲಿ ಕಿಮೀ ಉದ್ದದವರೆಗೂ ವಾಹನಗಳು ನಿಂತಿದ್ದವು.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನಲ್ಲಿ ಹಲವು ಅಪಘಾತಗಳಿಗೆ ಕಾರಣವಾಗುತ್ತಿರುವ ಟಿಪ್ಪರ್‌ ಲಾರಿಗಳ ಹುಚ್ಚಾಟ ನಿಯಂತ್ರಿಸುವಲ್ಲಿ ಸಾರಿಗೆ ಇಲಾಖೆ ವಿಫಲವಾಗುತ್ತಿದೆ ಎಂದು ಅಪಾದಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಇಲ್ಲಿನ ಡಾ,ರಾಜ್‌ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಬೆಳಗ್ಗೆ 10 ಗಂಟೆಗೆ ಪಾರಂಭವಾದ ಪ್ರತಿಭಟನೆಯಿಂದ ವೃತ್ತದ ಮೂರೂ ಕಡೆಯ ರಸ್ತೆಗಳಲ್ಲಿ ಕಿಮೀ ಉದ್ದದವರೆಗೂ ವಾಹನಗಳು ನಿಂತಿದ್ದವು. ಪ್ರತಿಭಟನಾಕಾರರನ್ನು ಮನವೊಲಿಸಿ ಸಂಚಾರ ಸುಗಮಗೊಳಿಸುವ ಸಿಪಿಐ ವಸಂತ್‌ ಕುಮಾರ್‌ ಯತ್ನಕ್ಕೆ ಸೊಪ್ಪು ಹಾಕದ ಪ್ರತಿಭಟನಾಕಾರರು, ಸ್ಥಳಕ್ಕೆ ಆರ್ಟಿಒ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ಮಧ್ಯಾಹ್ನ 12 ಗಂಟೆಗೆ ಬಂದ ಸಾರಿಗೆ ಇಲಾಖೆಯ ಇನ್ಸ್‌ ಪೆಕ್ಟರ್‌ ಶ್ರೀನಿವಾಸ್‌ ಅವರನ್ನು ತರಾಟೆ ತೆಗೆದುಕೊಂಡ ಪ್ರತಿಭಟನಾಕಾರರು, ಇಂದಿನ ಪ್ರತಿಭಟನೆ ಬಗ್ಗೆ ಮನವಿ ಹಾಗೂ ಮಾಹಿತಿ ನೀಡಿದ್ದರೂ ನೀವು ತೋರುತ್ತಿರುವ ನಿರ್ಲಕ್ಷ್ಯ ಸಲ್ಲದು ಎಂದು ಆಕ್ರೋಶ ಹೊರಹಾಕಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಚಾಕನಹಳ್ಳಿ ನಾಗರಾಜು ಮಾತನಾಡಿ, ಮಾಲೂರು ತಾಲೂಕಿನಲ್ಲಿ ಜಲ್ಲಿ ಕ್ರಷರ್‌ ಹೆಚ್ಚಾಗಿದ್ದು, ನಿತ್ಯ ಸಾವಿರಾರು ಜಲ್ಲಿ ತುಂಬಿದ ಟಿಪ್ಪರ್‌ ಲಾರಿಗಳು ಸಂಚರಿಸುತ್ತಿವೆ. ಅವುಗಳ ವೇಗದ ನಿರ್ಲಕ್ಷ್ಯದ ಚಾಲನೆಗೆ ವಾರಕ್ಕೊಂದಾದರೂ ಅಪಘಾತಗಳಾಗಿ ಸಾವು- ನೋವು ಸಂಭವಿಸುತ್ತಿವೆ. ಈ ಹಿಂದೆ ಪೊಲೀಸರು ಟಿಪ್ಪರ್‌ ಮಾಲೀಕರಿಗೆ ಲೋಡ್‌ ಗಳಿಗೆ ಕವರ್‌ ಮಾಡಿಕೊಂಡು ಸಂಚರಿಸಬೇಕೆಂದು ಹಾಗೂ ಡ್ರೈವಿಂಗ್‌ ಲೈಸನ್ಸ್‌ ಇದ್ದರೆ ಮಾತ್ರ ವಾಹನ ಚಾಲನೆಗೆ ಕ್ರಷರ್ ಮಾಲೀಕರು ಅನುಮತಿ ನೀಡಬೇಕೆಂದು ತಿಳಿಸಿದ್ದರು. ಅವುಗಳನ್ನೆಲ್ಲ ಗಾಳಿಗೆ ತೂರಿದ ಟಿಪ್ಪರ್ ಮಾಲೀಕರು ನಂಬರ್‌ ಪ್ಲೇಟ್‌ ಇಲ್ಲದ ಲಾರಿಗಳನ್ನು ಸಹ ಲೋಡ್‌ ತುಂಬಿಸಿ ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ. ಈ ವರ್ಷದಲ್ಲಿ ಹತ್ತು ಜನರಿಗೂ ಹೆಚ್ಚು ಸಾವಿಗೀಡಾದ ಪ್ರಕರಣಗಳು ಟಿಪ್ಪರ್‌ ಅಪಘಾತದಲ್ಲಿ ಸಂಭವಿಸಿದ್ದು, ಸತ್ತವರಿಗೆ ನ್ಯಾಯ ಸಿಗಲು ಆರ್.ಟಿ.ಒ.ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಬೇಕಿದೆ ಎಂದು ಅಗ್ರಹಿಸಿದರು.

ಜಿಲ್ಲಾ ಸಂಚಾಲಕ ಎಸ್.ಎಂ.ರಾಜು, ಪುರಸಭೆ ಸದಸ್ಯ ಭಾನುತೇಜಾ, ಆಟೋ ಶ್ರೀನಿವಾಸ್‌ , ಮಹಿಳಾ ಅಧ್ಯಕ್ಷೆ ಶಾಂತಮ್ಮ,ಮೋಹನ್‌, ಆಟೋ ಮಂಜು, ತಾಲೂಕು ಅಧ್ಯಕ್ಷ ಎಚ್.ವೈ.ನಾರಾಯಣಸ್ವಾಮಿ , ಕೆ.ಎನ್.ಜಗದೀಶ್‌ , ಡಿ.ಎನ್‌.ಗೋಪಾಲ್‌ ,ಚೆನ್ನಕೃಷ್ಣ, ದ್ಯಾಪಸಂದ್ರ ಅಮರ್‌ ,ಅಂಜಿ, ಶಾಮಣ್ಣ, ಮಂಜುನಾಥ್‌ ಗೌಡ, ನಾಗೇಶ್‌, ಮಂಗಾಪುರ ಸ್ವಾಮಿ, ಕಿಶೋರ್‌ ಕುಮಾರ್‌ ಇದ್ದರು.

Share this article