The contribution of cooperative sector to the country's economy is immense
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶದ ಆರ್ಥಿಕ ಬೆಳವಣಿಗೆಗೆ ವೇಗ ಒದಗಿಸಿಕೊಡುವಲ್ಲಿ ಮತ್ತು ಜನಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಮಹತ್ವವಾದುದು ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಗಮದ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗ ಬುಧವಾರ ಜ್ಞಾನಸಹ್ಯಾದ್ರಿಯ ಪ್ರೊ. ವೆಂಕಟರಾಮಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಹಕಾರ ತತ್ವ ಕುರಿತ ಚರ್ಚಾಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಮುಲ್ ಎಂದೇ ಪ್ರಸಿದ್ಧವಾದ ಗುಜರಾತ್ ಮೂಲದ ಆನಂದ್ ಹಾಲು ಉತ್ಪಾದಕರ ಸಂಘ, ನಂದಿನಿ, ಮಲೆನಾಡು ಭಾಗದ ಮ್ಯಾಮ್ಕೋಸ್ ನಂತಹ ಸಹಕಾರಿ ಸಂಸ್ಥೆಗಳು ರೈತರು, ಜನಸಾಮಾನ್ಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮಹತ್ತರ ಕಾರ್ಯ ಮಾಡುತ್ತಿವೆ. ದೇಶಾದ್ಯಂತ ಇಂತಹ ಸುಮಾರು ಎಂಟೂವರೆ ಲಕ್ಷ ಸಹಕಾರಿ ಸಂಘಗಳು ಗುಡಿಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಉದ್ಯಮ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುತ್ತಿವೆ ಎಂದರು. ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಎಂ.ಆರ್. ಸತ್ಯಪ್ರಕಾಶ್ , ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಯಶವಂತಕುಮಾರ್, ಸಹಕಾರ ನಿರ್ವಹಣಾ ಸಂಸ್ಥೆಯ ಉಪನ್ಯಾಸಕಿ ಡಾ. ಕೆ.ಸೌಮ್ಯ, ಡಾ. ವಡಿವೇಲು, ಡಾ. ಹಾಲಸ್ವಾಮಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.