-ತಾಲೂಕು ವೈದ್ಯಾಧೀಕಾರಿ ಡಾ.ರಾಜಾ ವೆಂಕಪ್ಪನಾಯಕ ಅಭಿಮತ । ಹುಣಸಗಿಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ । ಪತ್ರಕರ್ತರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಹುಣಸಗಿ
ವೈದ್ಯರು ಮತ್ತು ಪತ್ರಕರ್ತರ ಸೇವೆ ಸಮಾಜಕ್ಕೆ ಅಮೂಲ್ಯ ಮತ್ತು ಅನನ್ಯ. ವೈದ್ಯರು ರೋಗಿಗಳ ದೈಹಿಕ ಆರೋಗ್ಯವನ್ನು ಕಾಪಾಡಿ ಜೀವ ಉಳಿಸಿದರೆ, ಪತ್ರಕರ್ತರು ಸಮಾಜದ ವಾಸ್ತವಿಕ ಚಿತ್ರಣವನ್ನು ಜನರಿಗೆ ತಲುಪಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತಾರೆ. ಇವರಿಬ್ಬರ ನಿಸ್ವಾರ್ಥ ಸೇವೆ ಸಮಾಜದ ಎರಡು ಪ್ರಮುಖ ಕಂಬಗಳಾಗಿವೆ ಎಂದು ತಾಲೂಕು ವೈದ್ಯಾಧೀಕಾರಿ ಡಾ.ರಾಜಾ ವೆಂಕಪ್ಪನಾಯಕ ಹೇಳಿದರು.ಹುಣಸಗಿ ಪಟ್ಟಣದಲ್ಲಿ ಪರಿಸರ ಸ್ನೇಹಿ ಗೆಳೆಯರ ಬಳಗದಿಂದ ಗುರುನಾಥ ಹುಲಕಲ್ ಅವರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯರು ಕಣ್ಣಿಗೆ ಕಾಣುವ ದೇವರುಗಳಂತೆ ರೋಗಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಾರೆ. ಅವರ ಸೇವೆ ಮಾನವೀಯತೆಯ ಪ್ರತೀಕವಾಗಿದೆ. ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ತಮ್ಮ ನೇರ, ನಿಷ್ಠುರ ಹಾಗೂ ಜವಾಬ್ದಾರಿಯುತ ಬರವಣಿಗೆಯ ಮೂಲಕ ಸಮಾಜದಲ್ಲಿನ ಅಕ್ರಮ, ಅವ್ಯವಸ್ಥೆ ಮತ್ತು ಸಮಸ್ಯೆಗಳನ್ನು ಬೆಳಕಿಗೆ ತಂದು, ಅವುಗಳ ನಿವಾರಣೆಗೆ ದಾರಿ ಮಾಡಿಕೊಡುವ ಮೂಲಕ ಸಮಾಜದ ಪರಿವರ್ತನೆಗೆ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷ ವೆಂಕನಗೌಡ ಅರಿಕೇರಿ ಮಾತನಾಡಿ, ವೈದ್ಯರು ಮತ್ತು ಮಾಧ್ಯಮಗಳು ಸಮಾಜದ ಎರಡು ಪ್ರಮುಖ ಅಂಗ. ವೈದ್ಯರು ಜನರ ಆರೋಗ್ಯವನ್ನು ಕಾಪಾಡಿದರೆ, ಪತ್ರಕರ್ತರು ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರಜಾಪ್ರಭುತ್ವವನ್ನು ಬಲಪಡಿಸುವರು ಹೀಗಾಗಿ ಸಮಾಜದ ಒಳಿತಿಗಾಗಿ ಎರಡೂ ಕ್ಷೇತ್ರಗಳ ಸೇವೆ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಗುರಣ್ಣಗೌಡ ಹೊರಗಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಂತೇಶ ಹಲಗಿಮನಿ ಸ್ವಾಗತಿಸಿದರು. ಶಣ್ಮುಖಪ್ಪ ನುಚ್ಚಿ ನಿರೂಪಿಸಿದರು. ಭೀಮಣ್ಣ ವಾಲ್ಮೀಕಿ ವಂದಿಸಿದರು.ಫೋಟೊ