ದೇಶದ ರಕ್ಷಣಾ ಕ್ಷೇತ್ರದಲ್ಲಿ ಕೊಡಗಿನ ಸೈನಿಕರ ಕೊಡುಗೆ ಅಪಾರ: ಶಾಸಕ ಡಾ. ಮಂತರ್ ಗೌಡ

KannadaprabhaNewsNetwork | Published : Jan 24, 2024 2:05 AM

ಸಾರಾಂಶ

ಯುವ ನಿರ್ದೇಶಕ ಸಿ.ಎಸ್. ಜೀವನ್ ನಿರ್ದೇಶಿಸಿರುವ ‘ಕದನ ವೀರ’ ಕಿರುಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ನಡೆಯಿತು. ಡಾ. ಮಂತರ್ ಗೌಡ ಅವರು ಟ್ರೇಲರ್‌ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಲ್ಲಿಗೆ ಸಮೀಪದ ಚಿಕ್ಕಭಂಡಾರ ಗ್ರಾಮದ ಯುವ ನಿರ್ದೇಶಕ ಸಿ.ಎಸ್. ಜೀವನ್ ನಿರ್ದೇಶಿಸಿರುವ ಸೈನಿಕರಿಗೆ ಸ್ಫೂರ್ತಿ ತುಂಬುವ, ಸೈನಿಕರ ದೇಶ ಸೇವೆ ಹಾಗೂ ಭರತಾಂಬೆಯ ಶತ್ರುಗಳಾದ ಉಗ್ರಗಾಮಿಗಳ ಸದೆಬಡಿಯುವ ರೋಮಾಂಚನಕಾರಿ ಕಥೆ ಆಧಾರಿತ ‘ಕದನ ವೀರ’ ಕಿರುಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ಚಿಕ್ಕಭಂಡಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಶಾಸಕ ಡಾ. ಮಂತರ್ ಗೌಡ ಅವರು ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿ, ದೇಶದ ರಕ್ಷಣಾ ಕ್ಷೇತ್ರದಲ್ಲಿ ಕೊಡಗಿನ ವೀರ ಸೇನಾನಿಗಳ ಕೊಡುಗೆ ಅಪಾರವಾಗಿದೆ. ಕೊಡಗು ಜಿಲ್ಲೆ ವೀರ ಸೇನಾನಿಗಳ ಬೀಡಾಗಿದೆ. ಇಲ್ಲಿ ಪ್ರತಿ ಮನೆಗೊಬ್ಬ ಸೈನಿಕರು ಇದ್ದಾರೆ. ಸೈನಿಕರ ದೇಶ ಸೇವೆ ಕುರಿತು ತೆಗೆದಿರುವ ಕದನವೀರ ಕಿರುಚಿತ್ರ ಜಿಲ್ಲೆಗೆ ಹೆಮ್ಮೆ ತಂದಿದೆ. ಗ್ರಾಮೀಣ ಪ್ರದೇಶದ ಯುವ ನಿರ್ದೇಶಕ ಸಿ.ಎಸ್. ಜೀವನ್‌ ಅವರಂತಹ ಪ್ರತಿಭೆಗಳ ಬೆಳವಣಿಗೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಕದನ ವೀರ ಕಿರುಚಿತ್ರ ಯಶ್ವಿಸಿಯಾಗಲಿ ಎಂದು ಹಾರೈಸಿದರು. ಶನಿವಾರಸಂತೆ ಅಥವಾ ಕುಶಾಲನಗರ ಚಿತ್ರ ಮಂದಿರದಲ್ಲಿ ಕದನ ವೀರ ಚಿತ್ರ ಬಿಡುಗಡೆ ಅವಕಾಶ ಮಾಡಿಕೊಡುತ್ತೇನೆ. ಅಲ್ಲದೆ ಚಿಕ್ಕಭಂಡಾರ ಗ್ರಾಮಸ್ಥರಿಗೆ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು. ಚಿತ್ರದ ನಿರ್ಮಾಪಕ ಎಕ್ಸ್ ಬ್ಲಾಕ್ ಕ್ಯಾಟ್ ಕಮಾಂಡೋ ಸಿ.ಎಂ. ಶ್ರೀಧರ್ ಮಾತನಾಡಿ, ಸೈನಿಕರ ಕುರಿತು ಕಿರುಚಿತ್ರ ತೆಗೆಯುವ ಇಂಗಿತ ವ್ಯಕ್ತಪಡಿಸಿದ ಯುವ ಪ್ರತಿಭೆ ಜೀವನ್‌ಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಚಿತ್ರತಂಡಕ್ಕೆ ಅಗತ್ಯ ಆರ್ಥಿಕ ನೆರವು ನೀಡಿದ್ದೇನೆ. ಈ ಕಿರುಚಿತ್ರ ಯಶಸ್ವಿಯಾಗಲಿ ಎಂದರು. ಯುವ ನಿರ್ದೇಶಕ ಸಿ.ಎಸ್.ಜೀವನ್ ಮಾತನಾಡಿ, ದೇಶದ ರಕ್ಷಣೆಯಲ್ಲಿ ಸೈನಿಕರ ಸೇವೆ ಹಾಗೂ ಅವರ ಜೀವನ ಕಥೆ ಆಧಾರಿತ ಕಿರುಚಿತ್ರ ತೆಗೆಯಲಾಗಿದ್ದು, ಎಲ್ಲರೂ ಈ ಚಿತ್ರವನ್ನು ವೀಕ್ಷಣೆ ಮಾಡಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರೇಮಿಗಾಗಿ ನಾ ಚಲನಚಿತ್ರ ನಿರ್ದೇಶಕಿ ಸ್ನೇಹಪ್ರಿಯ, ನಿರ್ಮಾಪಕಿ ಅನಿತಾ ಶ್ರೀಧರ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಲತೀಫ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ್‌, ಗ್ರಾಪಂ ಸದಸ್ಯ ರಾಮ, ಸಿ.ಈ. ದಯಾಕರ, ಮಾಜಿ ಸದಸ್ಯ ರಂಗಸ್ವಾಮಿ, ಸಹಕಾರ ಸಂಘದ ನಿರ್ದೇಶಕ ಶಿವಣ್ಣ, ವಿರೂಪಾಕ್ಷ, ಹಾಲಪ್ಪ, ಮುಖಂಡರಾದ ಸಿ.ಕೆ. ಧರ್ಮಪ್ಪ, ಟಿ.ಎಸ್. ಯತೀಶ್, ಲತೀಫ್‌, ಪ್ರೇಮ್ ಕುಮಾರ್, ಸುರೇಶ್, ದೊಡ್ಡಕುಂದ ವೇದಕುಮಾರ್, ಸಾಬ್ ಜಾನ್, ಅಪ್ಪಾಜಿ, ಚಂದ್ರಪ್ಪ, ಮಧು, ನಂದೀಶ್, ವಸಂತ, ಸಿ.ಸಿ. ಮಹೇಶ್, ನವೀನ್, ಚೇತನ್, ಕುಶಾಲ, ಶಿಕ್ಷಕರಾದ ಸತೀಶ್, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳು ಹಾಗೂ ಗ್ರಾಮದ ಯುವಕ, ಯುವತಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಇದೇ ಸಂದರ್ಭ ಮಾಜಿ ಸೈನಿಕರನ್ನು ಚಿತ್ರತಂಡದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Share this article