ದೇಶದ ಅಭಿವೃದ್ಧಿಗೆ ಮಠಗಳ ಕೊಡುಗೆ ಅಪಾರ: ಸಚಿವ ಈಶ್ವರ ಖಂಡ್ರೆ

ಸರ್ವರಿಗೂ ಲೇಸನ್ನು ಬಯಸಿದ ಸಮುದಾಯ ಲಿಂಗಾಯತ ಸಮುದಾಯ. ಯಾವ ಸಮುದಾಯ ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟಿತೋ ಅದು ಇಂದು ತನಗೇ ಸಾಮಾಜಿಕ ನ್ಯಾಯ ಕೇಳುವ ಸ್ಥಿತಿ ಬಂದಿದೆ ಎಂದು ವಿಷಾದಿಸಿದರು ಎಂದು ಸಚಿವರು ವಿಷಾದಿಸಿದರು.

KannadaprabhaNewsNetwork | Published : Apr 26, 2024 7:46 PM IST

ಕನ್ನಡಪ್ರಭ ವಾರ್ತೆ ಭಾಲ್ಕಿ

ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಲಿಂಗಾಯತ ವೀರಶೈವ ಮಠಗಳು ನೀಡಿರುವ ಕೊಡುಗೆ ಅಪಾರವಾದದ್ದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಭಾಲ್ಕಿಯ ವೀರಭದ್ರೇಶ್ವರ ದೇವಾಲಯದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಮಠಗಳು ಅನ್ನ ದಾಸೋಹ, ಜ್ಞಾನ ದಾಸೋಹವನ್ನು ಮಾಡುವ ಮೂಲಕ ಲಿಂಗಾಯತರಿಗಷ್ಟೇ ಅಲ್ಲ ಎಲ್ಲ, ಜಾತಿ, ಧರ್ಮದವರಿಗೂ ಶಿಕ್ಷಣ ನೀಡುವ ಮಹತ್ಕಾರ್ಯ ಮಾಡಿದೆ ಎಂದರು.

ಲಿಂಗಾಯತ ಮಠಗಳ ಆಶ್ರಯದಲ್ಲಿ ಹಲವು ಎಂಜಿನಿಯರಿಂಗ್ ಕಾಲೇಜುಗಳು ನಡೆಯುತ್ತಿವೆ. ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿವೆ. ಐಎಎಸ್, ಐಪಿಎಸ್ ತರಬೇತಿ ಕಾಲೇಜುಗಳೂ ನಡೆಯುತ್ತಿದೆ. ಇಲ್ಲಿ ಎಲ್ಲ ಧರ್ಮೀಯರೂ ವ್ಯಾಸಂಗ ಮಾಡುತ್ತಿದ್ದಾರೆ. ಸರ್ವರಿಗೂ ಲೇಸನ್ನು ಬಯಸಿದ ಸಮುದಾಯ ಲಿಂಗಾಯತ ಸಮುದಾಯ. ಯಾವ ಸಮುದಾಯ ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟಿತೋ ಅದು ಇಂದು ತನಗೇ ಸಾಮಾಜಿಕ ನ್ಯಾಯ ಕೇಳುವ ಸ್ಥಿತಿ ಬಂದಿದೆ ಎಂದು ವಿಷಾದಿಸಿದರು.

ಸಂಸ್ಕಾರ ಕೊಟ್ಟ ಮಠಗಳು:

ನಮ್ಮ ಯುವಕರಲ್ಲಿ ಧರ್ಮದ ಮಹಿಮೆ ಸಾರಿ, ಯುವ ಜನರು ಧರ್ಮ ವಿಮುಖರಾಗದಂತೆ ಮತ್ತು ಆಚಾರ- ವಿಚಾರ ಬಿಡದಂತೆ ಹಾಗೂ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸುವಲ್ಲಿಯೂ ನಮ್ಮ ವೀರಶೈವ, ಲಿಂಗಾಯತ ಮಠಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ನಮ್ಮ ಜನರಿಗೆ ಪರಂಪರೆ ಮತ್ತು ಸಂಸ್ಕೃತಿಯ ತಿಳಿಸಿ, ಸಂಸ್ಕಾರ ಕಲಿಸಿದ್ದು ಮಠಗಳು ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಮಹತ್ವ ತಿಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಹುಡುಗಿ ಮಠದ ಷಟಸ್ಥಳ ಬ್ರಹ್ಮ ವಿರೂಪಾಕ್ಷ ಮಹಾಸ್ವಾಮೀ ಸಾನ್ನಿಧ್ಯ ವಹಿಸಿದ್ದ ಸಭೆಯಲ್ಲಿ ಮೆಹಕರ್ ನ ರಾಜೇಶ್ವರ ಶಿವಾಚಾರ್ಯರು, ಹಲಬರ್ಗಾದ ಹಾವಗಿ ಲಿಂಗೇಶ್ವರ ಶಿವಾಚಾರ್ಯ ಸ್ವಾಮೀ, ಶಿವಶರಣಯ್ಯ ಸ್ವಾಮಿ, ಗುರಯ್ಯಸ್ವಾಮಿ, ಡಾ. ಪ್ರಭುಲಿಂಗ ಸ್ವಾಮಿ, ಕಲ್ಲಯ್ಯ ಸ್ವಾಮಿ, ಸತೀಶ್ ಸ್ವಾಮಿ, ಮನ್ಮಥ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ ಸ್ವಾಮಿ, ನಿತೀಶ್ ಪಾಟೀಲ್, ಪರಮೇಶ್ವರ ಸ್ವಾಮಿ, ಬಸವರಾಜ ವಂಕೆ, ನಾಗನಾಥ ಸ್ವಾಮಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share this article