ಮುಂಡರಗಿ: ಹಿಂದಿನ ಕಾಲದಲ್ಲಿ ಬಡವರು ಹಾಗೂ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕಲಿಯುವುದೆಂದರೆ ಬಹಳ ದುಸ್ತರವಾಗಿತ್ತು. ಮುಂಡರಗಿ ಅನ್ನದಾನೀಶ್ವರ ಮಠ ಸೇರಿದಂತೆ ಬಡವರ ಹಾಗೂ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಕನ್ನಡ ನಾಡಿನ ಅನೇಕ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ತಿಳಿಸಿದರು.
ನೆರೆಯ ಕೊಪ್ಪಳ ಜಿಲ್ಲೆಯಲ್ಲಿ ಹುಟ್ಟಿದ ನನಗೆ ಶಿಕ್ಷಣ ಕಲಿಯಲು ಇಂತಹ ಜಾಗ ದೊರೆತಿದ್ದರಿಂದಾಗಿ ನಾನು ಕಳೆದ 26 ವರ್ಷಗಳಿಂದ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವೆ. ಕರ್ತವ್ಯದಲ್ಲಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ದೊರೆತಾಗೊಮ್ಮೆ ಶ್ರೀಗಳು ಕರೆದು ಹರಸಿ ಆಶಿರ್ವದಿಸುತ್ತಾ ಬಂದಿದ್ದಾರೆ. ಪೂಜ್ಯರಿಗೆ ಯಾವುದೇ ಆಸೆ, ದುರಾಸೆಗಳಿರುವುದಿಲ್ಲ. ಸಮಾಜವನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುವುದು ಶ್ರೀಗಳ ಉದ್ದೇಶವಾಗಿರುತ್ತದೆ. ಅನ್ನದಾನೀಶ್ವರರು ನಮಗೆ ಅನ್ನ, ವಿದ್ಯ ಜತೆಗೆ ಸಂಸ್ಕಾರವನ್ನು ಕಲಿಸಿದ್ದಾರೆ ಎಂದರು.
ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀಮಠದ 8ನೇ ಪೀಠಾಧಿಪತಿಗಳಾದ ಸೊರಟೂರು ಅಜ್ಜನವರ ಲಿಂಗೈಕ್ಯ ಶತಮಾನೋತ್ಸವ ಹಾಗೂ ವಿದ್ಯಾ ಸಮಿತಿ ಶತಮಾನೋತ್ಸವ ಎರಡೂ ಏಕಕಾಲದಲ್ಲಿ ಆಚರಿಸಲಾಗುತ್ತಿದೆ. ಸೊರಟೂರು ಅಜ್ಜನವರು ಸರ್ವಧರ್ಮದ ಸಮನ್ವಯಿಗಳಾಗಿದ್ದರು. ತಾವು 10ನೇ ಪೀಠಾಧಿಪತಿಯಾದ ನಂತರ ಎಲ್ಲರ ಸಹಾಯ, ಸಹಕಾರದಿಂದ ಅನೇಕ ಅಭಿವೃದ್ದಿ ಕಾರ್ಯಗಳನ್ನು, ಸಾಹಿತ್ಯದ ಚಟುವಟಿಕೆ ಹಾಗೂ ಸಮಾಜೋಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಅದನ್ನು ಕಿರಿಯ ಪೂಜ್ಯರು ಸಹ ಮುಂದುರಿಸಿಕೊಂಡು ಹೋಗಬೇಕು ಎಂದರು.ಶಿವಕುಮಾರ ಬಳೂಟಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಅವರಿಗೆ ಅನ್ನದಾನೀಶ್ವರ ಪ್ರತಿಷ್ಠಾನದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ಸಂಸ್ಥೆಯಲ್ಲಿ ಕಳೆದ ವರ್ಷ ಸೇವಾ ನಿವೃತ್ತಿ ಹೊಂದಿದ ಡಿ.ಟಿ. ಪಾಟೀಲ, ಎಸ್.ಎಸ್. ಇನಾಮತಿ, ಡಿ.ಸಿ. ಮಠ ಸೇರಿದಂತೆ ಅನೇಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.