ಸಮಾಜೋನ್ನತಿಗೆ ತೋಂಟದ ಸಿದ್ಧಲಿಂಗ ಶ್ರೀಗಳ ಕೊಡುಗೆ ಅಪಾರ: ಡಾ. ಸಿದ್ಧರಾಮ ಸ್ವಾಮೀಜಿ

KannadaprabhaNewsNetwork |  
Published : Feb 27, 2026, 02:45 AM IST
ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ದೂರದೃಷ್ಟಿ ಹೊಂದಿದ್ದ ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಮುಂಬರುವ ಸಮಸ್ಯೆಗಳನ್ನು ಅರಿತು ಸಹಸ್ಪಂದಿಸುವ ಮೂಲಕ ಜನಸಾಮಾನ್ಯರ ಸ್ವಾಮಿಗಳಾಗಿ ಬದುಕಿದರು. ನಾಡಿನ ಸ್ವಾಮಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು

ಗದಗ: ಬಸವಾದಿ ಶರಣರ ವಿಚಾರಗಳಿಗೆ ಪೂರಕವಾಗಿ ಬದುಕಿದವರು ತೋಂಟದ ಸಿದ್ಧಲಿಂಗ ಶ್ರೀಗಳು. ಭಾಷಾ ಪ್ರೀತಿ ಪರಿಸರ ಕಾಳಜಿ, ಪುಸ್ತಕ ಪ್ರೀತಿ ಅದ್ವಿತೀಯವಾದುದು. ಸಮಾಜದ ಉನ್ನತಿಗೆ ಸದಾ ಶ್ರಮಿಸಿದ ಸ್ವಾಮಿಗಳು ಜನಸಾಮಾನ್ಯರ ಸಂಕಟಗಳಿಗೆ ದನಿಯಾದರು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದೂರದೃಷ್ಟಿ ಹೊಂದಿದ್ದ ಶ್ರೀಗಳು ಮುಂಬರುವ ಸಮಸ್ಯೆಗಳನ್ನು ಅರಿತು ಸಹಸ್ಪಂದಿಸುವ ಮೂಲಕ ಜನಸಾಮಾನ್ಯರ ಸ್ವಾಮಿಗಳಾಗಿ ಬದುಕಿದರು. ನಾಡಿನ ಸ್ವಾಮಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ 600ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಮಠವನ್ನು ಜ್ಞಾನ ದಾಸೋಹದ ಕೇಂದ್ರವನ್ನಾಗಿಸಿದರು. ಲೇಖಕರನ್ನು, ಸಂಶೋಧಕರನ್ನು ಪ್ರೋತ್ಸಾಹಿಸಿದರು. ಈ ಕಾರ್ಯದಿಂದಲೇ ಅವರನ್ನು ಪುಸ್ತಕ ಸ್ವಾಮೀಜಿ, ಕನ್ನಡ ಜಗದ್ಗುರು ಎಂದು ಜಗದ ಜನ ವ್ಯಾಖ್ಯಾನಿಸಿದ್ದಾರೆ.

ತೋಂಟದ ಸಿದ್ಧಲಿಂಗ ಶ್ರೀಗಳು ಗೋಕಾಕ ಚಳವಳಿಗೆ ಸಿಂದಗಿಯಲ್ಲಿ ಮುನ್ನುಡಿ ಬರೆಯುವ ಮೂಲಕ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೈಂಕರ್ಯಕ್ಕೆ ಮುನ್ನುಡಿ ಇಟ್ಟರು. ಶಿವಾನುಭವ ವೇದಿಕೆ ಮೂಲಕ ಕನ್ನಡವನ್ನು ಕಟ್ಟುವ ಕಾರ್ಯವನ್ನು ಪೂಜೆಯ ರೂಪದಲ್ಲಿ ನೇರವೇರಿಸಿದ್ದಾರೆ. ಅವರು ಕನ್ನಡಕ್ಕಾಗಿ ಬದುಕಿದರು ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪೂಜ್ಯರು ಸೂಕ್ಷ್ಮಮತಿಗಳಾಗಿದ್ದು, ಸಮಾಜಕ್ಕೆ ಒದಗಬಹುದಾದ ಆಪತ್ತುಗಳನ್ನು ಮುಂಚಿತವಾಗಿಯೇ ಗ್ರಹಿಸಿ ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಪ್ರತಿ ವ್ಯಕ್ತಿಯಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಬಂದ ಭಕ್ತರಿಗೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ ಓದುವ ಸಂಸೃತಿಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಮಾಡಿದರು. ಭಕ್ತರು ನೀಡಿದ ಹಣವನ್ನು ಪುಸ್ತಕ ಪ್ರಕಟಣೆಗೆ ಬಳಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಮಾಡಿದರೆಂದರು. ಈ ವೇಳೆ ದತ್ತಿದಾನಿಗಳಾದ ಸುರೇಖಾ ಸದಾನಂದ ಪಿಳ್ಳಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಡಾ. ಜಿ.ಬಿ. ಪಾಟೀಲ, ಅನ್ನದಾನಿ ಹಿರೇಮಠ, ಸಿ.ಕೆ.ಎಚ್. ಶಾಸ್ತ್ರಿ(ಕಡಣಿ), ಯಲ್ಲಪ್ಪ ಹಂದ್ರಾಳ, ಮಂಜುಳಾ ವೆಂಕಟೇಶಯ್ಯ, ಸತೀಶಕುಮಾರ ಚನ್ನಪ್ಪಗೌಡರ, ಅಮರೇಶ ರಾಂಪುರ, ಗುರುಪಾದ ಕಟ್ಟಿಮನಿ, ಉಮಾ ಕಣವಿ, ಅಕ್ಕಮ್ಮ ಪಾರ್ವತಿಮಠ, ಬಿ.ಬಿ. ಹೊಳಗುಂದಿ, ಕೆ.ಎಸ್. ಜಯದೇವ ಭಟ್, ಎಂ.ಎಫ್. ಡೋಣಿ, ಕಲ್ಲೇಶ ಮೂರಶಿಳ್ಳಿನ, ಮಂಜುನಾಥ ಹದ್ಲಿ, ಶಾಮನಗೌಡ ಅಳಗುಂಡಿ, ಸಿ.ಎಂ. ಮಾರನಬಸರಿ, ದಿಲೀಪಕುಮಾರ ಮುಗಳಿ, ಬಾಲಚಂದ್ರ ಕೋಟಿ, ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಇಂದುಮತಿ ಪೋತದಾರ, ತೇಜಸ್ವಿನಿ ತೋಟದ, ಅಣ್ಣಪ್ಪ ಹರ್ಲಾಪೂರ, ಭಾರತಿ ಗುಂಜಾಳ, ಶೈಲಜಾ ಗಿಡ್ನಂದಿ, ಲಕ್ಷ್ಮೀ ಹರ್ಲಾಪೂರ, ಭಾಗ್ಯಶ್ರೀ ಹರ್ಲಾಪೂರ, ಸುಧಾ ಬಳ್ಳಿ ಸೇರಿದಂತೆ ಇತರರು ಇದ್ದರು.

ಚಿಲ್ಲಾಳೇಶ್ವರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಮೂಹ ವಚನಗಾಯನ ಜರುಗಿತು. ಈರಣ್ಣ ಮಣಕವಾಡ ಅವರಿಂದ ವಚನ ಗಾಯನ ಜರುಗಿತು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶಿವಾಜಿ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ
ಫೆ. 28ಕ್ಕೆಶೈಕ್ಷಣಿಕ ಸಮ್ಮೇಳನ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ