ಧಾರವಾಡ: ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಬಹಳ ಮಹತ್ವದ ಪಾತ್ರ ವಹಿಸಿದೆ. ಆದರೆ ದೇಶಕ್ಕೆ ಸಂಘದ ಕೊಡುಗೆ ಏನು? ಎಂಬ ವಿರೋಧಿಗಳ ಪ್ರಶ್ನೆ ಹಾಸ್ಯಾಸ್ಪದ ಎಂದು ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖ ದುರ್ಗಣ್ಣ ಹೇಳಿದರು.
ಸಂಘ ಸಂಸ್ಥಾಪಕರಾದ ಕೇಶವ ಬಲಿರಾಮ ಹೆಡಗೇವಾರ, ಕಾಂಗ್ರೆಸ್‌ನಲ್ಲಿ ಬಹಳ ಮಹತ್ವದ ಜವಾಬ್ದಾರಿ ಹೊಂದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಇದೆಲ್ಲವನ್ನೂ ಕಾಂಗ್ರೆಸ್ ಮರೆ ಮಾಚಿದೆ ಎಂದರು.
ಡಾ. ಹೆಡಗೆವಾರರು ದೇಶಕ್ಕಾಗಿ ದುಡಿದ ಕುರಿತು ಸಂಘ ಎಲ್ಲೂ ಹೇಳಿಲ್ಲ. ಸಂಘದ ಸ್ಥಾಪನೆ ರಾತ್ರೋರಾತ್ರಿ ಹುಟ್ಟಿದ ಕಲ್ಪನೆಯಲ್ಲ, ಜನ್ಮದತ್ತ ದೇಶಭಕ್ತರಾದ ಹೆಡಗೆವಾರರು ಅವರಿಗೆ ಬಾಲ್ಯದಲ್ಲಿ ಬೆಳೆದಿತ್ತು. ಹೀಗಾಗಿ ದೇಶ ಕಟ್ಟುವ ಕಾಯಕಕ್ಕೆ ಅಣಿಯಾದರು ಎಂದರು.ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರವಿಕುಮಾರ ಹೊಸಮನಿ, ಜನನಿ ಹಾಗೂ ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು. ಈ ಧ್ಯೇಯದೊಂದಿಗೆ ಸಮಸ್ತ ಭಾರತೀಯರನ್ನು ಬೆಸೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯ ಶ್ಲಾಘಿಸಿದರು.
ಶತಶತಮಾನಗಳಿಂದ ಪರಕೀಯರ ದಬ್ಬಾಳಿಕೆಗೆ ಬಾಧಿತರಾದ ಭಾರತವು ಪುನಃ ಮೈಕೊಡವಿಕೊಂಡು ಅಸ್ತಿತ್ವ, ಅಸ್ಮಿತೆ ಉಳಿಸಿಕೊಂಡ ಅಭೂತಪೂರ್ವ ಪರಂಪರೆ ನಮ್ಮದು. ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮ ಜವಾಬ್ದಾರಿ ಎಂದರು.ಪ್ರಪಂಚದಲ್ಲಿ ಭಾರತ ನಮ್ಮ ಹೃದಯಕ್ಕೆ ಹತ್ತಿರ. ಭಾರತ ಎಂಬ ಹೂದೋಟದಲ್ಲಿ ಹಿಂದೂಗಳು ಒಗ್ಗೂಡಬೇಕು. ಸಂಘದ ಧ್ಯೇಯಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ದೇಶಿವಸ್ತು ಬಳಕೆ, ಪರಿಸರ ಜಾಗೃತಿ ಮರೆಯದಂತೆ ಕರೆ ನೀಡಿದರು.
ಜಾತಿ-ಮತ, ಪಂಥ, ಧರ್ಮ ಹಾಗೂ ಭೇದ-ಭಾವಗಳನ್ನು ತೊಡೆದು ಹಾಕುವ ಮೂಲಕ ಬಾಹ್ಯಶಕ್ತಿಗಳಿಂದ ಭಾರತ ದೇಶ ಕಾಪಾಡುತ್ತ, ಆತ್ಮನಿರ್ಭರದ ಶಾಂತಿ ಸಂದೇಶ ಸಾರುವ ಜತೆಗೆ ಭಾರತ ವಿಶ್ವಗುರುವಾಗಿ ಮಾಡುವ ಸಂಕಲ್ಪ ಮಾಡಲು ಹೇಳಿದರು.ಸಮಾರಂಭದಲ್ಲಿ ಸಂಘ ಚಾಲಕ ಡಾ. ವೇದವ್ಯಾಸ ದೇಶಪಾಂಡೆ, ಜಿಲ್ಲಾ ಸಂಘ ಸಂಚಾಲಕ ಗೋವಿಂದಪ್ಪ, ಸರಸ್ವತಿ ವಿಜಯಾನಂದ ಶ್ರೀ, ಪೃಥ್ವಿಯೋಗಾನಂದ ಶ್ರೀ, ಮೋಹನ ಮೋರೆ, ಅರವಿಂದ ಶಿರಹಟ್ಟಿ, ದತ್ತಾ ಡೋರ್ಲೆ ಸೇರಿ ಅನೇಕರು ಪಾಲ್ಗೊಂಡಿದ್ದರು.