ರಾಮನಗರ: ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಸಹಕಾರದಿಂದಲೇ ಜೀವನ ನಡೆಸುತ್ತಾನೆ. ಮನುಷ್ಯನಿಗೂ ಹಾಗೂ ಸಹಕಾರಕ್ಕೂ ಅವಿನಾಭಾವ ಸಂಬಂಧವಿದ್ದು, ಮಾನವನ ಪ್ರತೀ ಚಟುವಟಿಕೆಯಲ್ಲೂ ಸಹಕಾರ ಇಲಾಖೆಯ ಅವಲಂಬನೆ ಇರುತ್ತದೆ. ಸಹಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರಾದ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
ಮನುಷ್ಯನ ಜನನದಿಂದ ಮರಣದವರೆಗೂ ಸಹಕಾರ ಇಲಾಖೆಯೊಂದಿಗೆ ನೇರ ಅಥವಾ ಪರೋಕ್ಷ ಸಂಬಂಧವಿರುತ್ತದೆ. ರೈತರ ವಿಕಾಸ, ಬಡತನ ನಿರ್ಮೂಲನೆ, ಗ್ರಾಮೀಣ ಆರ್ಥಿಕ ಪ್ರಗತಿ ಸೇರಿದಂತೆ ಒಟ್ಟಾರೆ ದೇಶದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಮಹಾರಾಷ್ಟ್ರ, ಗುಜರಾತ್ ಹಾಗೂ ಕೇರಳ ರಾಜ್ಯಗಳಲ್ಲಿ ಸಹಕಾರ ಕ್ಷೇತ್ರ ಅತ್ಯಂತ ಬಲಿಷ್ಠವಾಗಿದೆ. ಪೂರ್ವ ರಾಜ್ಯಗಳಾದ ಒರಿಸ್ಸಾ, ಬಿಹಾರ, ಅಸ್ಸಾಂನಲ್ಲಿ ಸಹಕಾರ ಕ್ಷೇತ್ರ ಮಹತ್ವ ಪಡೆದಿಲ್ಲ. ರೈತರ ತಲಾ ಆದಾಯ, ರಾಷ್ಟ್ರೀಯ ಉತ್ಪನ್ನ (ಜಿಡಿಪಿ), ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ಸಂಘಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ದೇಶಾದ್ಯಂತ ಸಹಕಾರ ಸಂಸ್ಥೆಗಳನ್ನು ಇನ್ನಷ್ಟು ಸದೃಢಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿಯೂ ಸಹಕಾರ ಸಂಸ್ಥೆಗಳನ್ನು ಶಕ್ತಿಕೇಂದ್ರಗಳಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸಾಲ ನೀಡುವ ಸಂಸ್ಥೆಗಳಷ್ಟೇ ಅಲ್ಲದೆ 25ಕ್ಕೂ ಹೆಚ್ಚು ವಿವಿಧ ಸೇವೆಗಳನ್ನು ಒದಗಿಸುವ ಬಹುದ್ದೇಶದ ವಾಣಿಜ್ಯ ಕೇಂದ್ರಗಳಾಗಿ ಸಹಕಾರ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ಅಶೋಕ್ ಮಾತನಾಡಿ, ಸರ್ಕಾರಿ ನೌಕರರ ವೇತನ, ಸರ್ಕಾರಿ ವಹಿವಾಟುಗಳೆಲ್ಲವೂ ಜಿಲ್ಲಾ ಮಟ್ಟದ ಡಿಸಿಸಿ ಬ್ಯಾಂಕ್‌ಗಳ ಮೂಲಕ ನಡೆಯುವಂತಾದರೆ ಸಹಕಾರಿ ಬ್ಯಾಂಕುಗಳ ಬೆಳವಣಿಗೆಯಾಗಲಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಸಹಕಾರ ಒಕ್ಕೂಟದ ಅಧ್ಯಕ್ಷರಾದ ಧನಂಜಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಯರೇಹಳ್ಳಿ ಮಂಜು, ಲಿಂಗೇಶ್ ಕುಮಾರ್, ಜೆಆರ್‌ಸಿಎಸ್ ಡಾ. ಉಮೇಶ್, ಜಂಟಿ ನಿಬಂಧಕರಾದ ಪುಂಡಲೀಕ ಎಲ್. ಸಾಧುರೆ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಚಂದ್ರೇಗೌಡ, ರಾಜಣ್ಣ, ಕ್ಯಾಸಾಪುರ ಶ್ರೀಧರ್, ಕೆ.ಪಿ. ಅಪರ ನಿವೃತ್ತ ನಿಬಂಧಕರಾದ ಗುರುಸ್ವಾಮಿ, ಸಹಕಾರ ಉಪನಿಬಂಧಕರಾದ ಕವಿತಾ, ಸಹಾಯಕ ನಿಬಂಧಕರಾದ ಪ್ರದೀಪ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಜಿಲ್ಲೆಯ ಎಲ್ಲಾ ತಾಲ್ಲೂಕಿನ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಸಹಕಾರ ಇಲಾಖೆಯನ್ನು ಇನ್ನಷ್ಟು ಬಲಿಷ್ಠವನ್ನಾಗಿಸಲು ಹಾಗೂ ಸಹಕಾರ ಕ್ಷೇತ್ರದ ಮಹತ್ವವನ್ನು ತಿಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪ್ರತೀ ವರ್ಷ ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. “ಸಹಕಾರದಿಂದ ಸಮೃದ್ಧಿ” ಎಂಬ ಧ್ಯೇಯದೊಂದಿಗೆ 2026ರ ಜೂನ್ 29 ರಿಂದ ಜುಲೈ 6ರ ವರೆಗೆ ಸಹಕಾರ ಸಪ್ತಾಹ ಕಾರ್ಯಕ್ರವನ್ನು ರಾಜ್ಯಾದ್ಯಂತ ಆಯೋಜಿಸಲಾಗಿದೆ.
6ಕೆಆರ್ ಎಂಎನ್ 3.ಜೆಪಿಜಿ