ಕಡೂರು: ಇಂದಿನಿಂದ (ಏ.10,11,ಮತ್ತು12) ಮೂರು ದಿನಗಳ ಕಾಲ ನಡೆಯಲಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಬಾರಿ 21ನೇ ಜಿಲ್ಲಾ ಮಟ್ಟದ ಸಮ್ಮೇಳನ ಅಜ್ಜಂಪುರ ಜಿ.ಸೂರಿ ವೇದಿಕೆಯಲ್ಲಿ ನಡೆಯಲಿದೆ. ಮೊದಲ ಬಾರಿಗೆ ಸಾಹಿತ್ಯ ಜಾಗೃತಿ ರಥ ಯಾತ್ರೆ ಮೂಲಕ ಸಾಹಿತ್ಯ ಜಾತ್ರೆಗೆ ಚಾಲನೆ ನೀಡಲಾಗಿದೆ.
60-30ರ ವಿಸ್ತೀರ್ಣದ ದೊಡ್ಡ ಸಭಾ ಮಂಟಪ ಸಿದ್ಧವಾಗಿದೆ.ಜಿಲ್ಲೆಯ 8 ತಾಲೂಕುಗಳಿಂದಲೂ ಬರುವ ಸಾವಿರಾರು ಸಂಖ್ಯೆಯ ಸಾಹಿತ್ಯಾಸಕ್ತರಿಗೆ ಊಟದ ವ್ಯವಸ್ಥೆ, 50 ಪುಸ್ತಕ ಮಳಿಗೆಗಳು, ಖಾದಿ ವಸ್ತ್ರ, ಸೀರೆಗಳ, ತಿಂಡಿಗಳ ಮಾರಾಟ ಮತ್ತು ಮಕ್ಕಳ ಆಟಿಕೆಗಳ ಮಾರಾಟ ಮತ್ತಿತರ ಮಳಿಗೆಗಳು ಇರಲಿವೆ.ಮೂರು ದಿನಗಳು ಡಾ. ಸರ್ಜಾ ನೇತೃತ್ವದ ಸ್ಪರ್ಶ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಉಚಿತ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಮೂರು ದಿನಗಳ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲೆಡೆಯಿಂದ ಸುಮಾರು 11-12 ಸಾವಿರ ಜನರು ಬರುವ ನಿರೀಕ್ಷೆ ಇದೆ. ಸರ್ಕಾರಿ ನೌಕರರಿಗೆ ಜಿಲ್ಲಾಧಿಕಾರಿಗಳು ಒಒಡಿ ಸೌಲಭ್ಯ ನೀಡಿದ್ದಾರೆ. ಒಟ್ಟಾರೆ ಹಲವು ಆಶೋತ್ತರಗಳೊಂದಿಗೆ ಜಿಲ್ಲಾ ಸಮ್ಮೇಳನ ನಡೆಯಲಿದೆ.