ಸಂವಿಧಾನದಿಂದ ದೇಶ ನಡೆಯುತ್ತಿದೆ, ಧರ್ಮ ಗ್ರಂಥಗಳಿಂದಲ್ಲ

KannadaprabhaNewsNetwork | Published : Mar 12, 2024 2:09 AM

ಸಾರಾಂಶ

ಭಾರತ ದೇಶ ನಡೆಯುತ್ತಿರುವುದು ಡಾ. ಬಿಆರ್ ಅಂಬೇಡ್ಕರ್ ರಚಿಸಿದ ಪವಿತ್ರ ಸಂವಿಧಾನದಿಂದ ಹೊರತು, ಯಾವುದೇ ಧರ್ಮ‌ ಗ್ರಂಥಗಳಿಂದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ‌ ಪ್ರಿಯಾಂಕ್ ಖರ್ಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಭಾರತ ದೇಶ ನಡೆಯುತ್ತಿರುವುದು ಡಾ. ಬಿಆರ್ ಅಂಬೇಡ್ಕರ್ ರಚಿಸಿದ ಪವಿತ್ರ ಸಂವಿಧಾನದಿಂದ ಹೊರತು, ಯಾವುದೇ ಧರ್ಮ‌ ಗ್ರಂಥಗಳಿಂದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ‌ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಕಂಪನಿ ಗೇಟ್ ಆವರಣದಲ್ಲಿ ಆಯೋಜಿಸಿದ್ದ ಕಲಬುರಗಿ ಜಿಲ್ಲಾ‌ ಮಟ್ಟದ ಸಂವಿಧಾನ ಜಾಗೃತಿ ಜಾಥಾದ ಸಮಾರೋಪ ಸಮಾರಂಭ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಪುರುಷ-ಮಹಿಳೆ, ಜಾತಿ-ವರ್ಣ, ಧರ್ಮ-ಪಂತ ಎಂಬ ಬೇಧವಿಲ್ಲದೆ ಸರ್ವರಿಗೆ ಸಮಾನ ಅವಕಾಶ ನೀಡಿರುವುದು ಸಂವಿಧಾನ. ದೇಶದಲ್ಲಿ 25 ಸಾವಿರ ಜಾತಿ-ಉಪ ಜಾತಿಗಳಿವೆ. ದೇಶದ ಪ್ರತಿ ಪ್ರಾಂತ್ಯ ನೋಡಿದಾಗ ರೀತಿ-ನೀತಿ, ಉಡುಗೆ-ತೊಡುಗೆ, ಧರ್ಮ ವಿಭಿನ್ನವಾಗಿದೆ. ಅಚಾರ‌ ವಿಚಾರಗಳು ಬೇರೆ. ಇದರ ಹೊರತಾಗಿ ನಾವೆಲ್ಲರು ಭಾರತೀಯರು ಎಂದು ನಮ್ಮೆಲ್ಲರನ್ನು ಒಂದು ಗೂಡಿಸುತ್ತಿರುವುದು ನಮ್ಮ‌ ಹೆಮ್ಮೆಯ ಸಂವಿಧಾನ ಎಂದರು.

ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಚಿತ್ತಾಪುರ ಕ್ಷೇತ್ರದ ಜನತೆ ಕಳೆದ ಬಾರಿ ಚುನಾವಣೆಯಲ್ಲಿ ಜಯಶಾಲಿಯನ್ನಾಗಿಸಿದ್ದು, ಚಿತ್ತಾಪೂರ ಅಭಿವೃದ್ಧಿ ಪಡಿಸುವೆ. ಹಿಂದಿನ ಸರ್ಕಾರ‌ ಕ್ಷೇತ್ರದ ₹300 ಕೋಟಿ ಹಣ ವಾಪಸ್ ಪಡೆದಿತ್ತು. ಇಂದು ಆ ಅನುದಾನ ಬಡ್ಡಿಯೊಂದಿಗೆ ₹415 ಕೋಟಿ ಮೊತ್ತದ ಕಾಮಗಾರಿಗಳಿಗೆ ಇಂದಿಲ್ಲಿ ಚಾಲನೆ ನೀಡಿದ್ದೇನೆಂದರು. ಕಲ್ಯಾಣ ಕರ್ನಾಟಕ ಪ್ರಗತಿ ಪಥ ಯೋಜನೆಯಡಿ ಈ ವರ್ಷ ₹1,000 ಕೋಟಿ ಮತ್ತು ಮುಂದಿನ ವರ್ಷ ಸಹ ₹1,000 ಕೋಟಿ ಮೊತ್ತದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ‌ ಮನೆ ಆರಂಭಿಸಿದ್ದೇವೆ. 371ಜೆ ಕಲಂ ನಡಿ ಉದ್ಯೋಗ ಭರ್ತಿಗೆ ಸರ್ಕಾರ ಮುಂದಾಗಿದೆ ಎಂದರು.

ಸಂವಿಧಾನ ಜಾಗೃತಿ ಮುಖ್ಯ: ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ರಾಜ್ಯದ ಸಂಸದರೊಬ್ಬರು ಅಂಬೇಡ್ಕರ್ ರಚಿಸಿದ ದೇಶ ಒಪ್ಪುವ ಸಂವಿಧಾನ ತಿದ್ದುಮಾಡಿ ಮಾಡುವುದಾಗಿ ಘಂಟಾಘೋಷವಾಗಿ ಹೇಳುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಸಂವಿಧಾನ ರಕ್ಷಣೆಗೆ ಹಿಂದಿಗ್ಗಿಂತ ಹೆಚ್ಚು ನಾವೆಲ್ಲರು ಇದೀಗ ಮುಂದಾಗಬೇಕಿದೆ ಎಂದರು.

ವಚನ ವಿವೇಕ ಕಿರುಹೊತ್ತಿಗೆ ಬಿಡುಗಡೆ: ಕಾರ್ಯಕ್ರಮದಲ್ಲಿ ವಿವಿಧ ವಚನಕಾರರ ಆಯ್ದ ವಚನಗಳ ಹೊತ್ತಿಗೆ "ವಚನ ವಿವೇಕ " ಕಿರು ಹೊತ್ತಿಗೆಯನ್ನು ಸಚಿವ‌ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ಆದಿಯಾಗಿ ಗಣ್ಯರು ಬಿಡುಗಡೆ ಮಾಡಿದರು. ಸ್ಥಳೀಯ ಮುಖಂಡ ಟೋಪಣ್ಣ ಕೋಮಟೆ ಅವರು 10 ಸಾವಿರ ಸಂವಿಧಾನ ಪ್ರಸ್ತಾವನೆ ಉಚಿತ ವಿತರಣೆಗೆ ಚಾಲನೆ ನೀಡಿದರು.

ಸಂವಿಧಾನ ಪ್ರಸ್ತಾವನೆ‌ ಬೋಧನೆ: ಕಾರ್ಯಕ್ರಮದಲ್ಲಿ ಕು. ಮನ್ವಿತಾ ಮತ್ತು ಕೃಷಿಕಾ ಅವರು ಸಂವಿಧಾನ ಪ್ರಸ್ತಾವನೆ ನಿರರ್ಗಳವಾಗಿ ಓದಿ‌ ಗಮನ ಸೆಳೆದರು. ನಂತರ ಸಾರ್ವಜನಿಕರಿಗೆ ಸಾಮೂಹಿಕವಾಗಿ ಪ್ರಸ್ತಾವನೆ ಬೋಧಿಸಲಾಯಿತು.

ಶಾಸಕರಾದ ಬಿ.ಆರ್. ಪಾಟೀಲ, ಕನೀಜ್ ಫಾತೀಮಾ, ಎಂ.ವೈ. ಪಾಟೀಲ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎಸ್.ಪಿ. ಅಕ್ಷಯ್ ಹಾಕೆ, ಜಿಪಂ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೆ.ಕೆ.ಆರ್.ಟಿ.ಸಿ. ಎಂ.ಡಿ ಎಂ.ರಾಚಪ್ಪ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ್ ಬಾಳೆ, ಚಿತ್ತಾಪುರ ತಹಸೀಲ್ದಾರ್‌ ಶೇಖ್ ಷಾಷಾವಲಿ, ಶಹಾಬಾದ ತಹಸೀಲ್ದಾರ್‌ ಮಲ್ಲಶೆಟ್ಟಿ ಎಸ್. ಚಿದ್ರೆ, ಕಾಳಗಿ ತಹಸೀಲ್ದಾರ ಗಮಾವತಿ ರಾಠೋಡ, ತಾಪಂ ಇಓ ನೀಲಗಂಗಾ ಬಬಲಾದ, ಡಿ.ಜಿ.ಸಾಗರ, ಜಗದೇವ ಗುತ್ತೇದಾರ, ಸುಭಾಷ ರಾಠೋಡ, ಮಾಪಣ್ಣ ಗಂಜಿಗೇರಿ ಸೇರಿದಂತೆ ಅನೇಕ ಜಿಲ್ಲಾ-ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Share this article