ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ ಕಾರ್ಯಕ್ರಮ । ಕುತಂತ್ರಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು
ಮೋದಿ ನಾಯಕತ್ವದಲ್ಲಿ ದೇಶ ಸದೃಢವಾಗಿದೆ, ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ವಿಶ್ವದ ಬಲಿಷ್ಠ ಆರ್ಥಿಕತೆ ಹೊಂದಿರುವ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿರುವ ಕುತಂತ್ರಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ನಡೆದ ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿ ಪ್ರಧಾನಿಯಾದ ಮೇಲೆ ದೇಶವನ್ನು ಶಕ್ತಿಯುತವಾಗಿ ಕಟ್ಟುವ ಕೆಲಸ ಮಾಡಿದ್ದಾರೆ. ವಿಶ್ವದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ನರೇಂದ್ರ ಮೋದಿ ಕೇಂದ್ರ ಬಿಂದುವಾಗಿದ್ದಾರೆ ಎಂದರು.೧೯೯೧-೯೨ರಲ್ಲಿ ಪೆಟ್ರೋಲ್-ಡೀಸೆಲ್ ಖರೀದಿಸಲು ಡಾಲರ್ ಇರಲಿಲ್ಲ. ೪ ಸಾವಿರ ಕೆಜಿ ಚಿನ್ನ ನೀಡಿ ಡಾಲರ್ ಖರೀದಿಸಿ ಇಂಧನ ಪಡೆಯಬೇಕಾಯಿತು. ಇಂದು ೭೨೧ ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲಿದೆ. ೧೪ ವರ್ಷಗಳಲ್ಲಿ ಮೋದಿ ಹಣ ಕೂಡಿಟ್ಟಿದ್ದಾರೆ. ಯುದ್ಧದಂತಹ ಸಂದರ್ಭದಲ್ಲೂ ೬೦ ದಿನಗಳಿಗೆ ಆಗುವಷ್ಟು ಇಂಧನ ಶೇಖರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಶ್ರೀಲಂಕಾ, ಬಾಂಗ್ಲಾದೇಶದಂತಹ ನೆರೆ ದೇಶಗಳ ಪರಿಸ್ಥಿತಿ ನೋಡಿ. ದೇಶದಲ್ಲಿ ಅರಾಜಕತೆ ಸೃಷ್ಟಿಯಾದರೆ ಅಧೋಗತಿಗೆ ಇಳಿಯುತ್ತದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಅರಾಜಕತೆ ಸೃಷ್ಟಿಸುವ ಬಗ್ಗೆ ಕಲಿತು ಬರುತ್ತಾರೆ. ಸೈನಿಕರು, ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಮಾತನಾಡುತ್ತಾರೆ ಎಂದು ಟೀಕಿಸಿದರು.