ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಮಂಗಲದ ಲಕ್ಷ್ಮಮ್ಮ ಮತ್ತು ಎಂ.ಕೆ.ಶಿವಣ್ಣರ ಪುತ್ರಿ ಎಂ.ಎಸ್.ಯಶಸ್ವಿನಿ ಮತ್ತು ಹುಲ್ಕೆರೆಕೊಪ್ಪಲು ಗ್ರಾಮದ ಸುಶೀಲಮ್ಮ ಮತ್ತು ಚಿಂದೇಗೌಡರ ಪುತ್ರ ಸಿ.ಸೋಮಶೇಖರ್ ಅವರು ಬೆಳಗ್ಗೆ ಸಸಿ ನೆಟ್ಟು, ರಕ್ತದಾನ ಮಾಡುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು.
ಗ್ರಾಮದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯಂತೆ ಶ್ರೀನಾದನಂದನಾಥ ಸ್ವಾಮಿ, ನಟ ಚೇತನ್ ಅಹಿಂಸಾ ಹಾಗೂ ನಟಿ ಪೂಜಾ ಗಾಂಧಿ ಸೇರಿದಂತೆ ಇತರೆ ಗಣ್ಯರ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯ ಮದುವೆ ಆಗುವ ಮೂಲಕ ಅರ್ಥಪೂರ್ಣ ಸಂಸಾರಿಕ ಹಾದಿ ತುಳಿದರು.ರೈತಸಂಘ ಮುಖಂಡರಾದ ನಂದಿನಿ ಜಯರಾಂ ವಿವಾಹ ಸಂಹಿತೆ ಬೋಧನೆ ಮಾಡಿ ಶುಭಾ ಹಾರೈಸಿದರೆ, ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾಕೇಂದ್ರ ಟ್ರಸ್ಟ್‌ನ ಶ್ರೀನಾದನಂದನಾಥಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕುವೆಂಪು ಅವರ ಮಂತ್ರಮಾಂಗಲ್ಯವನ್ನು ಅಳವಡಿಸಿಕೊಂಡರೆ ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ಅದ್ದೂರಿ ಆಡಂಬರ ಅನವಶ್ಯಕ. ಸರಳವಾದ ಸಹಬಾಳ್ವೆಯೇ ಶೇಷ್ಠವಾದದ್ದು ಎಂದರು.
ಚಲನಚಿತ್ರ ನಟಿ ಪೂಜಾಗಾಂಧಿ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ, ಮತ್ತೊಂದು ಜೀವ ಉಳಿಸಲು ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯ. ನಾನು ಕೂಡ ಮಂತ್ರ ಮಾಂಗಲ್ಯವನ್ನೇ ಆಯ್ದುಕೊಂಡು ಮದುವೆಯಾದೆ. ಅದೇ ನಿಟ್ಟಿನಲ್ಲಿ ಸಾಗುತ್ತಿರುವ ಯಶಸ್ವಿನಿ ಹಾಗೂ ಸೋಮಶೇಖರ್ ಅವರ ದಾಂಪತ್ಯ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು.