ಕನ್ನಡಪ್ರಭ ವಾರ್ತೆ ಆಲೂರು
ತಾಲೂಕು ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗ ಯುವ ಬ್ರಿಗೇಡ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಸಮಾಜಕ್ಕೆ ಹಾಗೂ ವರ್ಗಕ್ಕೆ ಸೀಮಿತವಾದವರಲ್ಲ. ಅವರು ಸರ್ವವ್ಯಾಪ್ತಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದ ಮುಖಂಡರನ್ನು ಕರೆದು ಜಾತ್ಯತೀತವಾಗಿ ಮಾಡುತ್ತಿರುವುದು ಒಂದು ಅರ್ಥಗರ್ಭಿತವಾದ ಸಮಾರಂಭವಾಗಿದೆ. 500 ವರ್ಷಗಳ ಹಿಂದೆಯೇ ಭವಿಷ್ಯದ ದೃಷ್ಟಿಯಿಂದ ಆಗಿನ ಕಾಲದಲ್ಲಿಯೇ ನಗರದಲ್ಲಿ 1500 ಕೆರೆಕಟ್ಟೆಗಳನ್ನು ನಿರ್ಮಿಸಿ ನೀರಿನ ದಾಹ ಇಂಗಿಸಿದಂತಹ ಖ್ಯಾತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಇವತ್ತು ನಾವು ಗ್ರೇಟರ್ ಬೆಂಗಳೂರು, ಬ್ರಾಂಡ್ ಬೆಂಗಳೂರು, ಬೃಹತ್ ಬೆಂಗಳೂರು ಎಂದು ನಾವು ಬೆಂಗಳೂರಿಗೆ ಹೇಳುತ್ತಿರುವ ಹೆಸರುಗಳು. ಆದರೆ ಈ ಬೆಂಗಳೂರಿಗೆ ಭದ್ರ ಬುನಾದಿಯನ್ನ ಹಾಕಿಕೊಟ್ಟವರು ನಾಡಪ್ರಭು ಕೆಂಪೇಗೌಡರು. ಅವರು ಬೆಂಗಳೂರನ್ನು ಕಟ್ಟದಿದ್ದರೆ ಬೆಂಗಳೂರಿಗೆ ಈ ಹೊಸ ಹೆಸರುಗಳನ್ನು ಇಡಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ನಮ್ಮ ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ಸುಮಾರು ಒಂದುವರೆ- ಎರಡು ಕೋಟಿ ಜನರು ತಮ್ಮ ಜೀವನೋಪಾಯಕ್ಕಾಗಿ ಬೆಂಗಳೂರು ನಗರವನ್ನ ಆಶ್ರಯಿಸಿದ್ದು ಇಂತಹ ಬೆಂಗಳೂರು ನಗರವನ್ನ ಕಟ್ಟಿದಂತಹ ನಾಡಪ್ರಭು ಕೆಂಪೇಗೌಡರು ಎಲ್ಲರಿಗೂ ಎಲ್ಲ ಜನಾಂಗಕ್ಕೂ ಸಮುದಾಯಕ್ಕೂ ಕೂಡ ಆದರ್ಶವಾಗಿದ್ದರೆ ಎಂದು ಕೆಂಪೇಗೌಡರ ಸಾಧನೆಯನ್ನು ನೆನಪಿಸಿಕೊಂಡರು.
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ನಾವು ಯಾವುದೇ ಸರ್ಕಾರವಿರಲಿ ಯಾವುದೇ ಪಕ್ಷದ ಸರ್ಕಾರವಿರಲಿ ಕೆಂಪೇಗೌಡರ ಆಡಳಿತವನ್ನು ಮಾದರಿಯಾಗಿ ಇಟ್ಟುಕೊಂಡು ಬಡವರ ದೀನದಲಿತರ ಮಧ್ಯಮ ವರ್ಗದವರ ಏಳಿಗೆಗೆ ಶ್ರಮಿಸಬೇಕು. ಕೆಂಪೇಗೌಡರ ಗೌರವಾರ್ಥವಾಗಿ ದೇವನಹಳ್ಳಿ ಬಳಿ ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶ್ರೀ ಕೆಂಪೇಗೌಡ ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಕ್ಕೆ ಸರ್ಕಾರ ಕೆಂಪೇಗೌಡ ರಸ್ತೆ ಎಂದು ನಾಮಕರಣ ಮಾಡಿದೆ. ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್‌ನಲ್ಲಿ ಬೆಂಗಳೂರಿನ ಸಂಸ್ಥಾಪಕರ ಸ್ಮರಣಾರ್ಥ ಲೋಹದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.ಇವರ ಆದರ್ಶವನ್ನು ಇಟ್ಟುಕೊಂಡು ಸರ್ಕಾರಗಳು ಆಡಳಿತ ಮಾಡಬೇಕೆಂದು ಸಲಹೆ ನೀಡಿದೆ ಎಂದರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ಬೆಂಗಳೂರು ನಗರವನ್ನ ನಿರ್ಮಾಣ ಮಾಡಿದಂತಹ ದೂರದೃಷ್ಟಿ ಉಳ್ಳಂತಹ ಜನಗಳು ವಾಸ ಮಾಡೋಕೆ, ವ್ಯಾಪಾರ ಮಾಡಲಿಕ್ಕೆ, ಕುಡಿಯುವ ನೀರಿಗೆ ಕೆರೆಕಟ್ಟೆಗಳನ್ನು ಸ್ಥಾಪಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಅಧಿಕಾರ ಯಾರಿಗೂ ಕೂಡ ಶಾಶ್ವತವಲ್ಲ. ಆದರೆ ಕೆಂಪೇಗೌಡರು ತಮ್ಮ ಅಧಿಕಾರದಲ್ಲಿ ಇದ್ದಂತ ಅವಧಿಯಲ್ಲಿ ಇಡೀ ವಿಶ್ವವೇ ಬೆಂಗಳೂರಿನ ಕಡೆ ತಿರುಗಿ ನೋಡುವಂತೆ ಆ ನಾಡನ್ನು ನಿರ್ಮಿಸಿದಂತಹ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಮಾತನ್ನು ಹೇಳುತ್ತಾರೆ. ಆದ್ದರಿಂದ ನಮಗೆ ಹಿಂದಿನ ದಾರ್ಶನಿಕರು, ರಾಜರು, ಸಮಾಜ ಸುಧಾರಕರು ನೀಡಿರುವ ಕೊಡುಗೆಗಳೇ ನಮಗೆ ಇತಿಹಾಸವಾಗಿದೆ. ಬೆಂಗಳೂರು ಬಳಿಯ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದ್ದು ಈ ಪ್ರತಿಮೆಯ ಉದ್ಘಾಟನೆಗೆ ಈ ದೇಶದ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರು ಆಗಮಿಸಿದ್ದಾರೆ ಎಂದರೆ ಕೆಂಪೇಗೌಡರ ಶೌರ್ಯ, ವ್ಯಕ್ತಿತ್ವ, ಕೊಡುಗೆ ಹಾಗೂ ಕೆಂಪೇಗೌಡರು ಮಾಡಿದ ಸಾಧನೆಗೆ ಹಿಡಿದ ಕೈಗನ್ನಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಚನ್ನರಾಯಪಟ್ಟಣ ಕ್ಷೇತ್ರದ ಶಾಸಕ ಸಿ. ಎನ್ ಬಾಲಕೃಷ್ಣ , ಮಾಜಿ ಶಾಸಕ ಎಚ್. ಎಂ ವಿಶ್ವನಾಥ್, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್. ಪಿ ಮೋಹನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಬಾಗೂರು ಮಂಜೇಗೌಡ, ಉಪ ತಹಸೀಲ್ದಾರ್ ರಮೇಶ್, ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ಕೆ. ಎಸ್ ಮಂಜೇಗೌಡ, ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ ಶಾಂತಕೃಷ್ಣ, ವೀರಶೈವ ಮಹಾಸಭಾ ಅಧ್ಯಕ್ಷ ರೇಣು ಕುಮಾರ್, ಅಖಿಲ ಭಾರತ ವೀರಶೈವ- ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಅಜಿತ್, ದಲಿತ ಮುಖಂಡರಾದ ವೆಂಕಟಯ್ಯ, ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿನಕಲಗೂಡು ಮಾಜಿ ಅಧ್ಯಕ್ಷ ಉದಯ ರವಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸಿ.ವಿಲಿಂಗರಾಜು, ನಟರಾಜ್ ನಾಗಲಗೂಡು, ಹಾಸನ ಹಾಲು ಒಕ್ಕೂಟಗಳ ನಿರ್ದೇಶಕ ಪಿ.ಎಲ್ ಲಿಂಗರಾಜು, ಸಮಾಜದ ಹಿರಿಯ ಮುಖಂಡರಾದ ರಾಜಪ್ಪಗೌಡ ಕದಾಳು, ಆಲೂರು ಅಧ್ಯಕ್ಷ ಪೃಥ್ವಿ ಜಯರಾಮ್ ಸಂಘಟನೆಗಳ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.