ಬ್ಯಾಡಗಿ: ಕಳೆದೆರಡು ದಿನಗಳ ಹಿಂದಷ್ಟೇ ಸುರಿದ ಮಳೆಗೆ ತಾಲೂಕಿನ ಅಂಗರಗಟ್ಟಿ-ಮಾಸಣಗಿ (ಬ್ಯಾಡಗಿ-ತಿಳವಳ್ಳಿ ರಸ್ತೆ) ನಡುವೆ ಮಾರ್ಗ ಮಧ್ಯದಲ್ಲಿರುವ ಸಂತೆ ಹಳ್ಳ ನದಿಯಂತೆ ಹರಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಳಿಸಿದೆ. ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು ಗ್ರಾಮದ ರೈತರು ಅತ್ಯಂತ ಖುಷಿಯಿಂದ ಮಾಡಬೇಕಾಗಿದ್ದ ದೀಪಾವಳಿ ಹಬ್ಬಕ್ಕೆ ತಣ್ಣೀರೆರೆಚಿದಂತಾಗಿದೆ.
ಬೃಹತ್ ಪ್ರಮಾಣದ ನೀರು ಹರಿಯಲು ಸದರಿ ಹಳ್ಳಕ್ಕೆ ಅಡ್ಡಲಾಗಿ ಸೇತುವೆ (ಬ್ರಿಡ್ಜ್) ನಿರ್ಮಾಣ ಆಗದಿರುವುದೇ ಇಷ್ಟೊಂದು ಸೃಷ್ಟಿಗೆ ಪ್ರಮುಖ ಕಾರಣವಾಗಿದ್ದು, ಇದರಿಂದ ಹಳ್ಳಕ್ಕೆ ಹೊಂದಿಕೊಂಡಿರುವ ನೂರಾರು ಎಕರೆ ಕೃಷಿಭೂಮಿಯಲ್ಲಿನ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ದೊಡ್ಡ ಅವಾಂತರ ಸೃಷ್ಟಿಸಿದೆ.ರೈತರ ಬದುಕಿಗೆ ಮುಳುವಾದ ಮಳೆ:ಅಕಾಲಿಕ ಸುರಿಯುತ್ತಿರುವ ಮಳೆ ಬಹಳಷ್ಟು ಅನಾಹುತಗಳನ್ನು ಮಾಡುತ್ತಿದ್ದು ಸರ್ಕಾರ ಸೇರಿದಂತೆ ಸಾರ್ವಜನಿಕರನ್ನು ನಿದ್ದೆಗೆಡಿಸಿದ್ದರು ಕೆಲವೊಮ್ಮೆ ಎಚ್ಚರಿಸುವ ಕೆಲಸವನ್ನು ಮಾಡುತ್ತಿದೆ. ಸದರಿ ಘಟನೆಯಿಂದ ಸಂತೆ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಅಂಗರಗಟ್ಟಿ ಮಾಸಣಗಿ ಸೇರಿದಂತೆ ಸದರಿ ರಸ್ತೆಯನ್ನು ಬಳಸುವ ಪ್ರತಿಯೊಬ್ಬರ ಬೇಡಿಕೆಯನ್ನಿಡುತ್ತಿದ್ದಾರೆ.
ಅಧಿಕಾರಿಗಳ ಎಡವಟ್ಟು ಕಂಗಾಲಾದ ರೈತ:ಸದರಿ ಸಮಸ್ಯೆ ಇದೇ ವರ್ಷ ನಡೆದಿದ್ದಲ್ಲ ಮಳೆ ಅರಂಭವಾಯಿತೆಂದರೆ ಸಂತೆ ಹಳ್ಳದ ನೀರು ರಸ್ತೆ ಮೇಲೆ ಹರಿಯಲಾರಂಭಿಸುತ್ತದೆ, ಹೊಸರಸ್ತೆ ನಿರ್ಮಿಸಲಾಗಿದೆಯಾದರೂ ಈ ವೇಳೆ ಸದರಿ ಹಳ್ಳಕ್ಕೆ ಅಡ್ಡಲಾಗಿ ಸೇತುವೆಯೊಂದನ್ನು ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರಾದರೂ ಕಿವಿಗೊಡದ ಲೋಕೋಪಯೋಗಿ ಇಲಾಖೆ ಕೇವಲ ಸಿಮೆಂಟ್ ಪೈಪ್‌ಹಾಕಿ ಕೈತೊಳೆದುಕೊಂಡಿದೆ, ಅಧಿಕಾರಿಗಳ ಎಡವಟ್ಟಿನಿಂದ ಹಳ್ಳದ ಅಕ್ಕಪಕ್ಕದಲ್ಲಿರುವ ನೂರಾರು ರೈತರನ್ನು ಬೀದಿಗೆ ತಂದು ನಿಲ್ಲಿಸಿದೆ.ನೀರಲ್ಲಿ ಕೊಚ್ಚಿಹೋದ ದೀಪಾವಳಿ: ಮಳೆ ಸೃಷ್ಟಿಸಿದ ಅವಾಂತರದಿಂದ ಮಾಸಣಗಿ ಗ್ರಾಮಸ್ಥರು ಅತ್ಯಂತ ಖುಷಿಯಿಂದ ನ ಡೆಸಬೇಕಾಗಿದ್ದ ದೀಪಾವಳಿ ನೀರಿನಲ್ಲಿ ಕೊಚ್ಚಿ ಹೋಗಿದೆ. ನೀರಿನ ರಭಸಕ್ಕೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಇನ್ನೂ ಕೆಲವರಂತೂ ಸುಮಾರು 10 ಕಿ.ಮೀ. (ಮಲ್ಲೂರ ಗ್ರಾಮದ ರಸ್ತೆ) ಸುತ್ತು ಬಳಸಿಕೊಂಡು ಸಂಚರಿಸಬೇಕಾಯಿತು, ಇನ್ನೂ ಹಬ್ಬಕ್ಕೆ ಬಂದವರು ಊರು ತಲುಪದೇ ಕಂಗಾಲಾಗುವಂತೆ ಮಾಡಿದೆ.
ಬೃಹತ್ ಹಳ್ಳವೆಂದೂ ಗಮನಕ್ಕಿದ್ದರೂ ಅಧಿಕಾರಿಗಳು ಚಿಕ್ಕದಾದ ಪೈಪ್‌ಗಳನ್ನು ಹಾಕಿ ಕೈತೊಳೆದುಕೊಂಡಿದ್ದಾರೆ. ಸ್ವಲ್ಪ ಮಳೆಯಾದರೂ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಕೃಷಿ ಚಟುವಟಿಕೆ ಸ್ಥಗಿತಗೊಳ್ಳಲಿವೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬನ್ನಿಹಟ್ಟಿ ಗ್ರಾಪಂ ಸದಸ್ಯ ಬಸವರಾಜ ಬನ್ನಿಹಟ್ಟಿ ಹೇಳಿದರು.ಅಕಾಲಿಕ ಮಳೆಗೆ ಬಹಳಷ್ಟು ನೀರು ಹರಿದಿದೆ, ರಸ್ತೆ ಮಾಡಿದ ಅಧಿಕಾರಿಗಳಿಗೆ ಹಳ್ಳಕ್ಕೆ ಸೇತುವೆ ನಿರ್ಮಿಸುವ ಪರಿಜ್ಞಾನವಿರಬೇಕು, ಕೃಷಿ ಭೂಮಿಗಳು ಜಲಾವೃತಗೊಂಡು ಬೆಳೆ ಸಂಪೂರ್ಣ ನಾಶವಾಗಿದೆ, ಆಗಿರುವ ನಷ್ಟವನ್ನು ಭರಿಸುವರ‍್ಯಾರು..? ಕೂಡಲೇ ಸೇತುವೆ ನಿರ್ಮಿಸಿ ನೀರು ಸರಾಗವಾಗಿ ಹರಿವಂತೆ ಮಾಡಬೇಕು, ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ನ್ಯಾಯವಾದಿ ಪ್ರಕಾಶ ಬನ್ನಿಹಟ್ಟಿ ಮಾಸಣಗಿ ಹೇಳಿದರು.