ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಮಂಗಳವಾರ ಖಡೇಬಜಾರ್‌ನ ಸಮಾದೇವಿ ಮಂದಿರದ ಬಳಿ ಆಯೋಜಿಸಿದ್ದ ವಿರಾಟ್ ಹಿಂದೂ ಮೇಳಾವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಸಂಸ್ಕೃತಿ ಹಾಗೂ ತತ್ವಗಳು ಜಗತ್ತಿಗೆ ಮಾದರಿಯಾಗಿದ್ದು, ಎಲ್ಲರಿಗೂ ಗೌರವ ಹಾಗೂ ರಕ್ಷಣೆಯನ್ನು ನೀಡುವ ಧರ್ಮವಾಗಿದೆ ಎಂದರು.ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಧರ್ಮವೀರ ಸಂಭಾಜಿ ಮಹಾರಾಜರು ಸನಾತನ ಧರ್ಮದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ರಕ್ಷಣೆಗೆ ಶ್ರಮಿಸಿದ್ದಾರೆ. ಬೆಳಗಾವಿ ನಗರದಲ್ಲಿ ಎಲ್ಲೆಡೆ ಶಿವಾಜಿ ಮಹಾರಾಜರ ಪ್ರತಿಮೆಗಳು ಕಾಣುವ ಕಾರಣದಿಂದ ಈ ನಗರವೇ ಶಿವನಗರಿ ಎಂಬ ಖ್ಯಾತಿ ಪಡೆದಿದೆ ಎಂದು ತಿಳಿಸಿದರು.ಭಗವದ್ಗೀತೆಯಲ್ಲಿ ಧರ್ಮರಕ್ಷಣೆಯ ತಾಕತ್ತು ಅಡಕವಾಗಿದ್ದು, ಅದರಲ್ಲಿನ ಪ್ರತಿಯೊಂದು ಅಧ್ಯಾಯವೂ ಮನುಷ್ಯನ ಜೀವನಕ್ಕೆ ದಾರಿ ತೋರುತ್ತದೆ. ಸನಾತನ ಧರ್ಮ ಶಾಶ್ವತವಾಗಿದ್ದು, ಅದರ ಸಂಸ್ಕೃತಿ ಇತರ ಧರ್ಮಗಳಿಗಿಂತ ಶ್ರೇಷ್ಠವಾಗಿದೆ ಎಂದು ಸ್ವಾಮೀಜಿ ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರು ಶತ್ರುಗಳ ಸ್ತ್ರೀಯರಿಗೂ ಗೌರವ ನೀಡಿದ ಮಹಾನ್ ವ್ಯಕ್ತಿತ್ವ ಹೊಂದಿದ್ದರು. ಅವರ ಶಿಸ್ತು, ಗುಣಗಳು ಇಂದಿಗೂ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದರು.ಶಿವ ಇತಿಹಾಸ ವಕ್ತಾರ ಡಾ.ಶಿವರತ್ನ ಶೆಟ್ಟೆ ಮಾತನಾಡಿ, ಬಲಿದಾನ ಮಾಸದ ಮಹತ್ವ ವಿವರಿಸಿ, ಮುಂದಿನ 40 ದಿನಗಳ ಕಾಲ ಪ್ರತಿಯೊಬ್ಬ ಹಿಂದೂ ಬಲಿದಾನ ಮಾಸ ಆಚರಿಸುವುದು ಧರ್ಮವೀರರಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ ಎಂದರು.ನಿವೃತ್ತ ಪ್ರಾಧ್ಯಾಪಕಿ ಪ್ರಾ.ಅರುಣಾ ನಾಯಕ್ ಮಾತನಾಡಿ, ದೇಶದ ಇತಿಹಾಸ ವೈಭವಶಾಲಿಯಾಗಿದ್ದು, ಹಿಂದೂ ಧರ್ಮದ ರಕ್ಷಣೆಗೆ ಪೂರ್ವಜರು ಪ್ರಾಣತ್ಯಾಗ ಮಾಡಿದ್ದಾರೆ. ಕುಟುಂಬದಿಂದಲೇ ಮಕ್ಕಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಬೋಧಿಸುವ ಅಗತ್ಯವಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಂಗವಾಗಿ ಚನ್ನಮ್ಮ ವೃತ್ತದಿಂದ ಕಾರ್ಯಕ್ರಮ ಸ್ಥಳದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಶಿವಾಜಿ ಮಹಾರಾಜರ ವೇಷಧಾರಿಗಳಾದ ಯುವಕರು, ಅಲಂಕರಿಸಿದ ಎತ್ತು ಜೋಡಿ, ಕೇಸರಿ ಸೀರೆ ಧರಿಸಿದ ಮಹಿಳೆಯರು ಹಾಗೂ ಹಿಂದೂ ಬಂಧು-ಭಗಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ದಿಗಂಬರ್ ಪವಾರ್, ಉಪಾಧ್ಯಕ್ಷ ಕಿಶೋರಿ ಕುರಣಿ, ಅನಿಲ್ ಅಷ್ಟೇಕರ, ಗೌತಮಿ ಜಾಧವ, ಪ್ರಕಾಶ ಹಲಗೇಕರ್, ಸೀಮಾ ತಿಳವೆ, ಗಜಾನನ ಮಿಸಾಲೆ, ಗಂಗಾಧರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.