ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ, ಪರಂಪರೆ ತೀರಾ ವಿಭಿನ್ನ ಹಾಗೂ ವಿಶಿಷ್ಟತೆಯಿಂದ ಕೂಡಿದ್ದು ಅದಕ್ಕೆ ಹೊಂದಿದಂತೆ ಶ್ರೀಮಂತ ಕಲೆಯನ್ನು ಕೊಡವ ಜನಾಂಗ ಸಾವಿರಾರು ವರುಷಗಳಿಂದ ಆಚರಿಸಿ, ಉಳಿಸಿ, ಬೆಳೆಸಿಕೊಂಡು ಬಂದಿದೆ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ, ನೆಲಜಿ ಇಗ್ಗುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ, ಪರಂಪರೆ ತೀರಾ ವಿಭಿನ್ನ ಹಾಗೂ ವಿಶಿಷ್ಟತೆಯಿಂದ ಕೂಡಿದ್ದು ಅದಕ್ಕೆ ಹೊಂದಿದಂತೆ ಶ್ರೀಮಂತ ಕಲೆಯನ್ನು ಕೊಡವ ಜನಾಂಗ ಸಾವಿರಾರು ವರುಷಗಳಿಂದ ಆಚರಿಸಿ, ಉಳಿಸಿ, ಬೆಳೆಸಿಕೊಂಡು ಬಂದಿದೆ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ, ನೆಲಜಿ ಇಗ್ಗುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ ಹೇಳಿದರು.
ನೆಲಜಿ ದವಸ ಭಂಡಾರದಲ್ಲಿ ಆಯೋಜಿಸಿದ ಶೀ ಇಗ್ಗುತ್ತಪ್ಪ ಭಗವತಿ ಆಟ್ ಪಾಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಒಳ್ಳೆಯ ಬೆಳವಣಿಗೆ ಅಲ್ಲ:
ಸಾಂಸ್ಕೃತಿಕ ಕಲೆಯನ್ನು ಮೈಗೂಡಿಸಿಕೊಂಡು ಹಬ್ಬ ಹರಿದಿನಗಳನ್ನು ಆಚರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಹಿರಿಯ ಜೀವಗಳು ಕಣ್ಮರೆಯಾಗಿದ್ದು, ಇಂದಿನ ಯುವ ಜನತೆ ಆಧುನಿಕತೆಯ ನೆಪದಲ್ಲಿ ಕೊಡವ ಜನಾಂಗದ ಸಿರಿವಂತ ಕಲೆಯನ್ನು ರೂಢಿಸಿಕೊಂಡು ಅದನ್ನು ಉಳಿಸಿಕೊಳ್ಳುವಲ್ಲಿ ತೀರಾ ಅಸಡ್ಡ ತೆಯನ್ನು ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ಗ್ರಾಮದ ಪುಟಾಣಿಗನ್ನು ಗುರುತಿಸಿ, ಶಿಬಿರವನ್ನು ಆಯೋಜಿಸುವ ಪ್ರಯತ್ನಕ್ಕೆ ಕೈ ಜೋಡಿಸಿದ ಗ್ರಾಮದ ಕಲಾ ಸಾಧಕರಾದ ನಾಪನೇರವಂಡ ಸೋಮಯ್ಯ , ಮಣವಟ್ಟಿರ ಅರುಣ್ ಪಳಂಗಪ್ಪ, ಮಣವಟ್ಟಿರ ನಂದ ಭೀಮಯ್ಯ, ಮಣವಟ್ಟಿರ ಪ್ರವೀಣ್ ಸಂಗಡಿಗರ ಸಂಕಲ್ಪ ಮತ್ತು ಸಾಧನೆಯನ್ನು ಶ್ಲಾಘಿಸಿದ ನಾಣಯ್ಯ ಅವರು ಇಂದು ಕೊಡವ ಜನಾಂಗದ ಸಂಖ್ಯೆ ಮತ್ತು ಆಚರಣೆಯಲ್ಲಿದ್ದ ಅದ್ಭುತ ಕಲೆ ಮತ್ತು ಸಂಸ್ಕೃತಿ ಅಳಿವಿನಂಚಿನಲ್ಲಿದ್ದು, ಜಗತ್ತಿನಲ್ಲಿಯೇ ಗುರುತಿಸಿಕೊಂಡಿರುವ ಕೊಡವ ಜನಾಂಗದ ಸಂಖ್ಯೆ ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ಮತ್ತು ಆಚರಣೆಯಲ್ಲಿದ್ದ ಸಂಸ್ಕೃತಿ, ಪರಂಪರೆ ಪದ್ಧತಿಗಳು ಅಳಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ಧಾರಿ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯ ಮೇಲೆ ಇದೆ ಮತ್ತು ಕೊಡವ ಜನಾಂಗದ ಕಲೆ ಹಾಗೂ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕೆಂದು ತಿಳಿಸಿದರು.
ಕಲಿಕೆಯ ಶಿಬಿರಗಳಲ್ಲಿ ತೊಡಗಿಸಿಕೊಳ್ಳಬೇಕು:
ಇತ್ತೀಚೆಗೆ ನಗರಗಳಲ್ಲಿ ವಾಸಿಸುತ್ತಿರುವ ಕೊಡವ ಜನಾಂಗದ ಪೋಷಕರು ಯುವ ಪೀಳಿಗೆಯನ್ನು ಕಲೆಯನ್ನು ಕರಗತ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದರೂ, ಪ್ರಮುಖ ಪಾತ್ರ ವಹಿಸಬೇಕಾಗಿದ್ದ ಗ್ರಾಮೀಣ ಭಾಗದ ಪೋಷಕರು ಮತ್ತು ಯುವ ಪೀಳಿಗೆ ನಿರಾಸಕ್ತಿ ತೋರುತ್ತಿರುವುದು ತೀರಾ ವಿಷಾದನೀಯ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕಲಿಕೆಯ ಶಿಬಿರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿನಂತಿಸಿದರು. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ನಾಪೋಕ್ಲು ಕೊಡವ ಸಮಾಜದ ವತಿಯಿಂದ ಆಯೋಜಿಸಲಾದ ಆಟ್ ಪಾಟ್ ಶಿಬಿರದಲ್ಲಿ ಸುಮಾರು 78 ಯುವಕರಿಗೆ ಕಲೆಯ ಬಗ್ಗೆ ತರಬೇತಿಯನ್ನು ನೀಡಿ, ನೀಡಿದ ಯಶಸ್ವೀ ಸಮಾರೋಪ ಸಮಾರಂಭದ ಪ್ರದರ್ಶನವನ್ನು ಉದಾಹರಿಸಿದರು. ಇಂತಹ ಪ್ರಯತ್ನ ಜಿಲ್ಲೆಯ ಮೂಲೆ ಮೂಲೆಗಳಲ್ಲಿಯೂ ಆರಂಭಗೊಳ್ಳಬೇಕು ಮತ್ತು ನಮ್ಮ ಜನಾಂಗದ ಸಂಸ್ಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ವಿನಂತಿಸಿ ಪುಟ್ಟ ಮಕ್ಕಳು ನೀಡಿದ ಮನಮೋಹಕ ಪ್ರದರ್ಶನವನ್ನು ಕಂಡು ಕೊಂಡಾಡಿದ ನಾಣಯ್ಯ ಅವರು ಮುಂದೆ ಅವರು ಮಹಾನ್ ಕಲಾ ಸಾಧಕರಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಆಯೋಜಕರಲ್ಲಿ ಪ್ರಮುಖರಾದ ಮಣವಟ್ಟಿರ ಅರುಣ್ ಪಳಂಗಪ್ಪ ಮಾತನಾಡಿ ಇಂತಹ ಶಿಬಿರವನ್ನು ಮುಂದೆಯೂ ಆಯೋಜಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ಪ್ರತಿಯೊಬ್ಬರ ಸಹಕಾರವನ್ನು ಕೋರಿದರು.
ಊರ ತಕ್ಕ ಮುಖ್ಯಸ್ಥ ರಾದ ನಾಪನೇರವ ಒ ಪೊನ್ನಪ್ಪ , ಬದ್ಧoಜೆಟ್ಟಿರ ನಾಣಯ್ಯ , ಬಾಡ ಕುಂಜಪ್ಪ, ಮತ್ತು ಕಯ್ಯಂದಿರ ಉತ್ತಯ್ಯ ತಮ್ಮ
ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.
ಶಿಬಿರದ ಪ್ರಮುಖ ತರಬೇತುದರರಾದ ಬೋಧನೆಯ ಪಾತ್ರವನ್ನು ವಹಿಸಿದ ನಾಪನೇರವಂಡ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಶಿಬಿರಾರ್ಥಿಗಳಿಗೆ ನಗದು ಪ್ರೋತ್ಸಾಹ ಧನದೊಂದಿಗೆ ನೆನಪಿನ ಕಾಣಿಕೆಯನ್ನು ನೀಡಿ ಬೀಳ್ಕೊಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.