ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಕರಾಳ ವಾಸ್ತವ ಬಯಲು: ಸ್ವಾತಿThe dark reality of the KPS Magnet project is exposed: Swathi

KannadaprabhaNewsNetwork |  
Published : Nov 27, 2025, 01:15 AM IST
 ಸ್ವಾತಿ | Kannada Prabha

ಸಾರಾಂಶ

ಇದಿಷ್ಟೇ ಅಲ್ಲದೆ, ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ, ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಕೇವಲ ಶಾಲೆಗಳಷ್ಟೇ ಅಲ್ಲದೆ ರಾಜ್ಯದ ಸಾವಿರಾರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಕೂಡ ಮುಚ್ಚುವ ಅಪಾಯಕ್ಕೆ ಸಿಲುಕಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಾಲೆಗಳನ್ನು ಅಭಿವೃದ್ಧಿಯ ಹೆಸರಲ್ಲಿ ರಾಜ್ಯದ ಜನತೆಯನ್ನು ವಂಚಿಸಿ ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಸಿದುಕೊಳ್ಳುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಮುಚ್ಚುತ್ತಿರುವ ೪೦,೦೦೦ ಸರ್ಕಾರಿ ಶಾಲೆಗಳ ಸಂಪೂರ್ಣ ಪಟ್ಟಿಯನ್ನು ಎಐಡಿಎಸ್‌ಒ ನಾಡಿನ ಜನರ ಮುಂದೆ ಇಟ್ಟು ಸರ್ಕಾರ ಜಾರಿಗೊಳಿಸುತ್ತಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಕರಾಳ ವಾಸ್ತವವನ್ನು ಬಯಲಿಗೆಳೆದಿದೆ ಎಂದು ಎಐಡಿಎಸ್‌ಒ ರಾಜ್ಯ ಸೆಕ್ರೆಟ್ರಿಯೆಟ್ ಸದಸ್ಯೆ ಸ್ವಾತಿ ತಿಳಿಸಿದರು.

ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರ್ಕಾರವು ಸ್ಪಷ್ಟನೆ ನೀಡುತ್ತಿದ್ದರೆ, ಶಿಕ್ಷಣ ಸಚಿವರು ‘ಶಾಲೆಯಲ್ಲಿ ಒಂದು ಮಗುವಿದ್ದರೂ ಆ ಶಾಲೆಯನ್ನು ಮುಚ್ಚುವುದಿಲ್ಲ’ ಎಂಬ ಮಾತನ್ನೇ ಪುನರುಚ್ಛರಿಸುತ್ತಿದ್ದಾರೆ. ಅವರ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಅವರದ್ದೇ ಸರ್ಕಾರದ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿ ವಾಸ್ತವಾಂಶವನ್ನು ರಾಜ್ಯದ ಜನರ ಮುಂದಿಟ್ಟಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯ ಸರ್ಕಾರವು ೪೦ ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಗ್ರಾಮ ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ ೬ ಸಾವಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಮೊದಲ ಹಂತದಲ್ಲಿ ರಾಜ್ಯದ ೮೦೦ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿದೆ (ಗಣಿಬಾಧಿತ ಜಿಲ್ಲೆಗಳಲ್ಲಿ ೧೦೦, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ೨೦೦ ಹಾಗೂ ಇತರೆ ಭಾಗದಲ್ಲಿ ೫೦೦) ಎಂದು ನುಡಿದರು.

ಈ ಯೋಜನೆಯನ್ನು ಪೈಲೆಟ್ ಪ್ರಾಜೆಕ್ಟ್‌ನಡಿ ಜಾರಿಗೊಳಿಸಲು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಲಾಗಿದೆ. ಹೊಂಗನೂರಿನಿಂದ ೬ ಕಿ.ಮೀ. ವ್ಯಾಪ್ತಿಯೊಳಗಿರುವ, ೭೭ ವಿದ್ಯಾರ್ಥಿಗಳಿರುವ ಹೊಡಿಕೆ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ೮೨ ವಿದ್ಯಾರ್ಥಿಗಳಿರುವ ಕನ್ನಿದೊಡ್ಡಿ ಶಾಲೆ, ೩೧ ವಿದ್ಯಾರ್ಥಿಗಳಿರುವ ಅಮ್ಮಳ್ಳಿ ದೊಡ್ಡಿ ಶಾಲೆ , ೧೦೦ ವಿದ್ಯಾರ್ಥಿಗಳಿರುವ ಸಂತೆಮೊಗೇನಹಳ್ಳಿ ಶಾಲೆ, ೨೦ ವಿದ್ಯಾರ್ಥಿಗಳಿರುವ ಮೊಗೇನಹಳ್ಳಿ ದೊಡ್ಡಿ, ೮೦ ವಿದ್ಯಾರ್ಥಿಗಳಿರುವ ಸುಣ್ಣಘಟ್ಟ ಶಾಲೆಗಳನ್ನು ಹೊಂಗನೂರಿನ ಕೆಪಿಎಸ್‌ಗೆ ತುರ್ತಾಗಿ ವಿಲೀನಗೊಳಿಸಿ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಇದರ ಪರಿಣಾಮ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಡಿ ರಾಜ್ಯದ ೪೦ ಸಾವಿರಕ್ಕೂ ಅಧಿಕ ಶಾಲೆಗಳು ವಿಲೀನಗೊಳ್ಳುತ್ತವೆ. ಸಮುದಾಯ, ಹಳ್ಳಿಗಳ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ.

ಇದಿಷ್ಟೇ ಅಲ್ಲದೆ, ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ, ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಕೇವಲ ಶಾಲೆಗಳಷ್ಟೇ ಅಲ್ಲದೆ ರಾಜ್ಯದ ಸಾವಿರಾರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಕೂಡ ಮುಚ್ಚುವ ಅಪಾಯಕ್ಕೆ ಸಿಲುಕಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾವ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಬೇಕು ಮತ್ತು ಆ ಶಾಲೆಗೆ ಯಾವ ಯಾವ ಶಾಲೆಗಳನ್ನು ಸೇರಿಸಬೇಕು ಎಂಬುದರ ಪೂರ್ಣ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ ಎಂದು ನುಡಿದರು.

ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆಯುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ಮಂಡ್ಯದ ೧೩೩೨ ಸರ್ಕಾರಿ ಶಾಲೆಗಳು ಮುಚ್ಚುವ ಪಟ್ಟಿಯಲ್ಲಿವೆ. ವಿಪರ್ಯಾಸವೆಂದರೆ, ವಿಲೀನದ ನೆಪದಲ್ಲಿ ಮುಚ್ಚುವ ಶಾಲಾ ಕಟ್ಟಡಗಳನ್ನು ಇತರೆ ಕೆಲಸಗಳಿಗೆ ವಿನಿಯೋಗಿಸಲು ಸರ್ಕಾರವು ಮುಂದಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸುವುದಾಗಿ ಹೇಳಿದೆ. ಸರ್ಕಾರಿ ಶಾಲಾ ಕಟ್ಟಡಗಳನ್ನು ಸ್ವಸಹಾಯ ಗುಂಪುಗಳಿಗೆ ನೀಡಲಾಗುವುದೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಒಂದೇ ಒಂದು ಶಾಲೆಯನ್ನು ಮುಚ್ಚದಿದ್ದ ಮೇಲೆ ಸರ್ಕಾರಿ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದರು.

ಸರ್ಕಾರದ ಈ ನಡೆಯ ವಿರುದ್ಧ ಪ್ರಬಲ ಹೋರಾಟವನ್ನು ಬೆಳೆಸಲು ಮತ್ತು ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧರಾಗಲು ನಾಡಿನ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಪ್ರೇಮಿ ಜನತೆಗೆ ಸರ್ಕಾರವು ಸವಾಲು ಹಾಕಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟಕ್ಕೆ ಮುಂದಾಗುವಂತೆ ಎಐಡಿಎಸ್ಒ ಕರೆ ಕೊಟ್ಟಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕಿ ಚಂದ್ರಿಕಾ ಉಪಸ್ಥಿತರಿದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ