ಕನ್ನಡಪ್ರಭ ವಾರ್ತೆ ಮೈಸೂರು
ಸಹಸ್ರಾರು ಭಕ್ತರು ಶ್ರೀ ಸುಬ್ರಹ್ಮಣೇಶ್ವರಸ್ವಾಮಿ ದರ್ಶನ ಪಡೆದು ಪುನೀತರಾದರು. ಮೈಸೂರು- ಬೆಂಗಳೂರು ಹೆದ್ದಾರಿಯ ಸಿದ್ದಲಿಂಗಪುರ ಬಳಿಯ ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ ಜಾತ್ರೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸಹಸ್ರಾರು ಮಂದಿ ಷಷ್ಠಿ ಜಾತ್ರೆ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮುಂಜಾನೆಯಿಂದ ತಡರಾತ್ರಿವರೆಗೆ ಮೈಸೂರು ಸೇರಿದಂತೆ ದೂರ ದೂರದ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು.
ಬುಧವಾರ ಮುಂಜಾನೆ 2 ಗಂಟೆಯಿಂದಲೇ ಸುಬ್ರಹ್ಮಣೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಅಷ್ಟವಧಾನ ಪೂಜೆ ನಂತರ ಹಾಲು, ಮೊಸರು, ಜೇನುತುಪ್ಪ, ಬೆಣ್ಣೆ ಅಭಿಷೇಕ ನೇರವೇರಿಸಲಾಯಿತು. ಕಳೆದ ರಾತ್ರಿಯೇ ಪೊಲೀಸ್ ಬಂದೋಬಸ್ತ್‌ನಿಯೋಜಿಸಲಾಗಿತ್ತು.ಮೈಸೂರು ಅರಮನೆಯಿಂದ ತಂದ ಬೆಳ್ಳಿ ನಾಗಾಭರಣವನ್ನು ತಹಸೀಲ್ದಾರ್, ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅವರ ಸಮ್ಮುಖದಲ್ಲಿ ದೇವರಿಗೆ ಧರಿಸಿ ಅಲಂಕರಿಸಲಾಯಿತು.
ಮುಂಜಾನೆಯಿಂದಲೇ ಸಾರ್ವಜನಿಕರು ದೇವರ ದರ್ಶನ ಪಡೆದರೆ, ಮಧ್ಯಾಹ್ನ ಸುಬ್ರಹ್ಮಣೇಶ್ವರ ಸ್ವಾಮಿಯ ರಥೋತ್ಸವ ಅತ್ಯಂತ ವೈಭವದಿಂದ ಜರುಗಿತು. ವಿಶೇಷವಾಗಿ ಅಲಂಕರಿಸಿದ್ದ ರಥೋತ್ಸವದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಸಿದ್ದಲಿಂಗಪುರದ ಚಂದ್ರಮೌಳೇಶ್ವರಸ್ವಾಮಿ ದೇವಾಲಯದವರೆಗೆ ರಥೋತ್ಸವ ನಡೆಯಿತು. ನಂತರ, ಅದೇ ಮಾರ್ಗವಾಗಿ ವಾಪಸ್ ದೇವಸ್ಥಾನ ತಲುಪಿತು.
ಸುಬ್ರಹ್ಮಣ್ಯ ಷಷ್ಠಿ ಜಾತ್ರೆ ಪ್ರಯುಕ್ತ ಪ್ರತಿವರ್ಷವೂ ವಿಶೇಷವಾಗಿ ದೇವರ ದರ್ಶನ ಪಡೆಯುವುದು ಸಂಪ್ರದಾಯ. ಅದರಂತೆ ಮೈಸೂರು, ಸಿದ್ದಲಿಂಗಪುರ, ಕಳಸ್ತವಾಡಿ, ಶ್ರೀರಂಗಪಟ್ಟಣ, ಹೆಬ್ಬಾಳು, ಕುಂಬಾರಕೊಪ್ಪಲು, ಮೇಟಗಳ್ಳಿ, ಯರಗನಹಳ್ಳಿ, ಪಾಲಹಳ್ಳಿ, ಕೆಆರ್‌ಎಸ್ ಸುತ್ತಮುತ್ತಲ ಹಳ್ಳಿಗಳಿಂದ ಭಕ್ತರು ಆಗಮಿಸಿದರು.
ಜಿಟಿಡಿ ಭೇಟಿ:
ಹುತ್ತಕ್ಕೆ ಹಾಲು- ಬೆಣ್ಣೆ ತನಿ:
ಷಷ್ಠಿ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲೆಡೆ ಭಕ್ತರು ಹುತ್ತಕ್ಕೆ ಹಾಲು(ತನಿ) ಎರೆದು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ನಗರದ ಹಲವೆಡೆ ಹುತ್ತಕ್ಕೆ ಹಾಗೂ ನಾಗರಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸುವ ಮೂಲಕ ಭಕ್ತರು ಷಷ್ಠಿ ಆಚರಿಸಿದರು. ವಿದ್ಯಾರಣ್ಯಪುರಂನ ಬೂತಾಳೆ ಮೈದಾನ, ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಾಲಯ, ಕುರುಬಾರಹಳ್ಳಿ ಬನ್ನಿಮಹಾಕಾಳೇಶ್ವರಿ ದೇವಾಲಯ, ಅಗ್ರಹಾರ ಗಣಪತಿ ದೇವಾಲಯ, ಕೆ.ಜಿ. ಕೊಪ್ಪಲಿನ ಬಂದಂತಮ್ಮ ದೇವಾಲಯ, ಜಿಲ್ಲಾಧಿಕಾರಿ ಕಚೇರಿ ಸಮೀಪದ ಕಾಡುಮಲ್ಲೇಶ್ವರ ದೇವಾಲಯ, ಯರಗನಹಳ್ಳಿ, ಸಿದ್ದಾರ್ಥ ಬಡಾವಣೆ, ಆಲನಹಳ್ಳಿ, ಸರಸ್ವತಿಪುರಂ, ಟಿ.ಕೆ. ಲೇಔಟ್, ಜನತಾನಗರ, ಬಿಸಿಲುಮಾರಮ್ಮ ದೇವಾಲಯ, ದಟ್ಟಗಳ್ಳಿ, ಬೋಗಾದಿ, ಮೇಟಗಳ್ಳಿ, ಕುಂಬಾರಕೊಪ್ಪಲು, ಕೆಸರೆ, ಜೆ.ಪಿ. ನಗರ, ರಮಾಬಾಯಿನಗರ, ಚಾಮುಂಡಿಪುರಂ, ಜೆಎಸ್‌ಎಸ್ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿಯೂ ಭಕ್ತರು ಹುತ್ತ ಹಾಗೂ ನಾಗರಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಿದರು.