ಕನ್ನಡಪ್ರಭ ವಾರ್ತೆ ಕೋಲಾರಶತಮಾನ ಕಳೆದರೂ ಲೈಂಗಿಕ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡಲು ಸಾಧ್ಯವಾಗಿಲ್ಲ. ಆದರೆ ಸಮಾನವಾಗಿ ಬದುಕಲು, ಲಿಂಗಾಧಾರಿತವಾಗಿ ಪಾಲ್ಗೊಳ್ಳಲು ಸಂವಿಧಾನ ನೀಡಿರುವ ಹಕ್ಕುಗಳ ಮೂಲಕ ಆರ್ಥಿಕ ಸಬಲತೆ ಒದಗಿಸುವುದು ಅತಿ ಮುಖ್ಯ ಎಂದು ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಡಾ ವಿ ಭಾಗ್ಯಲಕ್ಷ್ಮಿ ಅಭಿಪ್ರಾಯಪಟ್ಟರು. ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ವಿವಿಯ ತನ್ನ ಮಂಗಸಂದ್ರದ ಸುವರ್ಣಗಂಗೆ ಆವರಣದಲ್ಲಿ ಪಿಎಂ ಉಷಾ ಸಹಯೋಗದಲ್ಲಿ ಆಯೋಜಿಸಿದ್ದ ‘ಲಿಂಗಾಧಾರಿತ ಪಾಲ್ಗೊಳ್ಳುವಿಕೆ-ಸಮತೆಯತ್ತಾ ಹೆಜ್ಜೆ’ ಎಂಬ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಲಿಂಗಾಧಾರಿತ ಪಾಲ್ಗೊಳ್ಳುವಿಕೆ
ಸಮಾನವಾಗಿ ಕಾಣಬೇಕು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಲೋಕನಾಥ್ ಮಾತನಾಡಿ, ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೆ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ, ಇದು ಸಾಧ್ಯವಿಲ್ಲದಿದ್ದರೆ ಲಿಂಗಾಧಾರಿತ ಪಾಲ್ಗೊಳ್ಳುವಿಕೆ ಸಾಧ್ಯವಾಗುವುದಿಲ್ಲ. ಸಮತೆ ಸಮಾನತೆ ಬಗೆಗೆ ಯೋಚನೆ ನಮ್ಮ ಸಂಬಂಧಗಳು ಉತ್ತಮಗೊಳ್ಳಲು ಸಹಾಯಮಾಡುತ್ತದೆ ಎಂದು ಹೇಳಿದರು.ಮಧ್ಯಾಹ್ನದ ಗೋಷ್ಠಿಯಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿ ಕೆ ಷರೀಫಾ ಅವರು ‘ಕನ್ನಡ ಸಾಹಿತ್ಯ ಸೃಷ್ಟಿಸುತ್ತಿರುವ ಸ್ತ್ರೀ ಸಂವೇದನೆಯ ಮಾದರಿಗಳು’ ಎಂಬ ವಿಷಯ ಕುರಿತು ಮಾತನಾಡಿದರೆ, ಟ್ರಾನ್ಸ್‌ಜೆಂಡರ್ ಮಹಿಳೆ ಕವಿ ಲೈಂಗಿಕ ಅಲ್ಪಸಂಖ್ಯಾತ ಹಕ್ಕುಗಳ ಸಂರಕ್ಷಣಾ ಸಂಸ್ಥೆ ‘ಪಯಣ’ದ ಸಂಸ್ಥಾಪಕರೂ ಯೋಜನಾ ನಿರ್ದೇಶಕರೂ ಆದ ಚಾಂದಿನಿ ಅವರು ‘ಸಾಮಾಜಿಕ ಮತ್ತು ಸಾಂಸ್ಕೃತಿಕ ಒಳಗೊಳ್ಳುವಿಕೆ ಸವಾಲುಗಳು’ ಕುರಿತು ಮಾತನಾಡಿದರು.ವಿಚಾರಸಂಕಿರಣದ ಸಮಾರೋಪ
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಡಾಮಿನಿಕ್ ಅಧ್ಯಕ್ಷತೆ ವಹಿಸಿದ್ದರು. ಈ ವಿಚಾರ ಸಂಕಿರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಸಮಾರೋಪ ಭಾಷಣ ಮಾಡಿದರು. ಸಮಾರಂಭದಲ್ಲಿ ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ನಿರಂಜನ ವಾನಳ್ಳಿ ಅವರು ಉಪಸ್ಥಿತರಿದ್ದರು.ವಿಚಾರ ಸಂಕಿರಣದಲ್ಲಿ ಪಿಎಂ ಉಷಾ ಸೆಲ್ ನೋಡಲ್ ಅಧಿಕಾರಿ ಡಾ. ರಮೇಶ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಂಯೋಜಕ ಡಾ. ಶ್ರೀನಿವಾಸ್ ಎಸ್.ಜಿ ಪ್ರಾಸ್ತಾವಿಕ ಮಾತುಗಳಾಡಿದರು. ಅಧ್ಯಾಪಕರುಗಳಾದ ಡಾ. ಗಾಯತ್ರಿ ದೇವಿ, ಡಾ. ಶ್ರೀನಿವಾಸ್ ಎನ್ ಗೋಷ್ಠಿಗಳನ್ನು ನಡೆಸಿಕೊಟ್ಟರು. ಸಮಾಜ ಕಾರ್ಯ ವಿಭಾಗದ ಅಧ್ಯಾಪಕ ಡಾ.ಗುಂಡಪ್ಪ ನಿರೂಪಿಸಿದರು.