ದಾಬಸ್‍ಪೇಟೆ: ಕನಕರು ಕೀರ್ತನೆಗಳ ಮೂಲಕ ಸಮಾಜ ತಿದ್ದುವ ನಿಟ್ಟಿನಲ್ಲಿ ಅಪಾರ ಶ್ರಮಿಸಿದ್ದಾರೆ. ಹಲವು ಶತಮಾನಗಳ ಹಿಂದೆ ಕನಕದಾಸರು ಸಾರಿದ ವಿಚಾರಧಾರೆಗಳು ಎಂದೆಂದಿಗೂ ಮನುಕುಲಕ್ಕೆ ದಾರಿದೀಪ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಮುಖ್ಯಶಿಕ್ಷಕಿ ಶೈಲಜಾ ತಿಳಿಸಿದರು. ಸೋಂಪುರ ಹೋಬಳಿಯ ಗೋವಿಂದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದಾಸ ಸಾಹಿತ್ಯಕ್ಕೆ ರಾಜಾಶ್ರಯವಿರದಿದ್ದರೂ ಸತತ ಊರೂರು ಅಲೆಯುತ್ತ ಭಕ್ತಿ ಭಾವದಿಂದ ಜನಮನ ಒಲಿಸಿಕೊಂಡು ಲೋಕದ ಡೊಂಕು ತಿದ್ದುವ ಕೆಲಸವನ್ನು ಆಸಕ್ತಿಯಿಂದ ನಿರ್ವಹಿಸಿದರು ಎಂದರು. ಶಿಕ್ಷಕರಾದ ಕೆಂಪರಾಜು, ಚನ್ನಬಸವರಾಜು, ಪ್ರಿಯಾಂಕ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.