ವಕೀಲರ ಸಂಘದ ಕಾರ್ಯಚಟುವಟಿಕೆಗಳಿಗೆ ನಾಲ್ಕು ಕಂಪ್ಯೂಟರ್‌ಗಳು, ಪ್ರಿಂಟರ್, ಅಗತ್ಯ ಪೀಠೋಪಕರಣಗಳು ಹಾಗೂ ಪುಸ್ತಕಗಳ ಸಂಗ್ರಹಕ್ಕಾಗಿ ಬೀರು ಮತ್ತು ಕಪಾಟುಗಳನ್ನು ಸಿಎಸ್‌ಆರ್ ನಿಯಡಿ ಒದಗಿಸಿಕೊಡುವಂತೆಯೂ ಕೋರಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರ ಅನುಕೂಲಕ್ಕಾಗಿ ಸುಸಜ್ಜಿತ ಇ-ಗ್ರಂಥಾಲಯ ಮತ್ತು ವಾಚನಾಲಯ ನಿರ್ಮಿಸುವ ಜತೆಗೆ, ವಕೀಲರ ಸಂಘದ ಕಾರ್ಯಚಟುವಟಿಕೆಗಳಿಗೆ ಅಗತ್ಯ ಕಂಪ್ಯೂಟರ್, ಪ್ರಿಂಟರ್ ಹಾಗೂ ಪೀಠೋಪಕರಣಗಳನ್ನು ಒದಗಿಸಲು ಅನುದಾನ ಬಿಡುಗಡೆ ಮಾಡುವಂತೆ ಕೋರಿ ಮಂಡ್ಯ ವಕೀಲರ ಸಂಘದಿಂದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಅವರು ಮನವಿ ಸಲ್ಲಿಸಿ, ಮಂಡ್ಯ ವಕೀಲರ ಸಂಘವು ಸುದೀರ್ಘ ಇತಿಹಾಸ ಹೊಂದಿದ್ದು, ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ವಕೀಲರು ಸದಸ್ಯರಾಗಿದ್ದಾರೆ. ನಗರದಲ್ಲಿ 16ಕ್ಕೂ ಹೆಚ್ಚು ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಹೊಸ ನ್ಯಾಯಾಲಯಗಳ ಸ್ಥಾಪನೆಯೊಂದಿಗೆ ವಕೀಲರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಹೊಸ ಕಾನೂನುಗಳು ಹಾಗೂ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳು ಪ್ರಕಟವಾಗುತ್ತಿವೆ. ಅವುಗಳ ನಿರಂತರ ಅಧ್ಯಯನ ವಕೀಲರಿಗೆ ಅಗತ್ಯವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ಕಕ್ಷಿದಾರರಿಗೆ ಉತ್ತಮ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಕೀಲರು ನಿರಂತರ ಅಧ್ಯಯನ ನಡೆಸಲು ಅನುಕೂಲವಾಗುವಂತೆ ನ್ಯಾಯಾಲಯದ ಆವರಣದಲ್ಲಿ ಆಧುನಿಕ ಸೌಲಭ್ಯಗಳಿರುವ ಇ-ಗ್ರಂಥಾಲಯ ಮತ್ತು ವಾಚನಾಲಯ ನಿರ್ಮಿಸುವ ಅಗತ್ಯವಿದೆ. ಈ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯದ ಗಮನಕ್ಕೆ ತಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳೀಯ ಜನಪ್ರತಿನಿಗಳ ಅನುದಾನದಲ್ಲಿ ಗ್ರಂಥಾಲಯ ನಿರ್ಮಿಸಲು ಅನುಮತಿಯೂ ದೊರೆತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಗ್ರಂಥಾಲಯ ನಿರ್ಮಾಣಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಯಿಂದ 20 ಲಕ್ಷ ಹಾಗೂ ಕೇಂದ್ರ ಸಚಿವರ ಇಲಾಖೆಯ ವ್ಯಾಪ್ತಿಯ ಕೈಗಾರಿಕಾ ಸಂಸ್ಥೆಗಳ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್)ಯಿಂದ 1 ಕೋಟಿ ರು. ಸೇರಿದಂತೆ ಒಟ್ಟು 1.20 ಕೋಟಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ.

ಇದಲ್ಲದೇ, ವಕೀಲರ ಸಂಘದ ಕಾರ್ಯಚಟುವಟಿಕೆಗಳಿಗೆ ನಾಲ್ಕು ಕಂಪ್ಯೂಟರ್‌ಗಳು, ಪ್ರಿಂಟರ್, ಅಗತ್ಯ ಪೀಠೋಪಕರಣಗಳು ಹಾಗೂ ಪುಸ್ತಕಗಳ ಸಂಗ್ರಹಕ್ಕಾಗಿ ಬೀರು ಮತ್ತು ಕಪಾಟುಗಳನ್ನು ಸಿಎಸ್‌ಆರ್ ನಿಯಡಿ ಒದಗಿಸಿಕೊಡುವಂತೆಯೂ ಕೋರಲಾಗಿದೆ. ಮಂಡ್ಯ ಜಿಲ್ಲೆಯ ಸಮಸ್ತ ವಕೀಲರಿಗೆ ಅನುಕೂಲವಾಗಲಿರುವ ಈ ಮಹತ್ವದ ಯೋಜನೆಗೆ ಸಚಿವರು ವಿಶೇಷ ಆಸಕ್ತಿ ವಹಿಸಿ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.

ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಎಸ್. ದೇವರಾಜು, ಪ್ರಧಾನ ಕಾರ್ಯದರ್ಶಿ ಬಿ.ಸತೀಶ್, ಚಂದ್ರಕಲಾ ಹಾಗೂ ಮಾಜಿ ಅಧ್ಯಕ್ಷ ಕೆ.ಎಂ.ಬಸವರಾಜು ಹಾಜರಿದ್ದರು.