ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಎರಕ್ಕಲ ಎಂಬಲ್ಲಿರುವ ಹೊಳೆಗೆ ಭಾನುವಾರ ಸಂಜೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಹಂಝ ಹಾಜಿ ಎಂಬವರ ಪುತ್ರ, ಸುಳ್ಯ ತಾಲೂಕಿನ ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ತಸ್ಲೀಮ್ (೧೬) ಮೃತಪಟ್ಟಿರುವ ವಿದ್ಯಾರ್ಥಿ. ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿರುವ ಅಜ್ಜಿ ಮನೆಯಲ್ಲಿದ್ದುಕೊಂಡು ಅರಂತೋಡಿನ ಕಾಲೇಜಿನಲ್ಲಿ ಕಲಿಯುತ್ತಿದ್ದ ತಸ್ಲೀಮ್, ದಸರಾ ರಜೆಯಲ್ಲಿ ಕೆಯ್ಯೂರಿನ ಕಟ್ಟತ್ತಾರುವಿನಲ್ಲಿರುವ ತನ್ನ ಮನೆಗೆ ಬಂದಿದ್ದ. ಭಾನುವಾರ ಸಂಜೆ ಆತ ತನ್ನ ಗೆಳೆಯರೊಂದಿಗೆ ಎರಕ್ಕಳ ಎಂಬಲ್ಲಿರುವ ಗೌರಿ ಹೊಳೆಯ ಮಾಕಟೆ ಕಯಕ್ಕೆ ಈಜಲು ಹೋಗಿದ್ದ. ಹೊಳೆಯ ನೀರಿಗಿಳಿದು ಈಜುತ್ತಿದ್ದ ವೇಳೆ ಆತ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ. ಈ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನೂರಾರು ಮಂದಿ ಸ್ಥಳೀಯರು ಕಣ್ಮರೆಯಾದ ಬಾಲಕನಿಗೆ ಹುಡುಕಾಟ ನಡೆಸಿದ್ದರು. ಪುತ್ತೂರು ಅಗ್ನಿ ಶಾಮಕ ದಳದ ಮುಳುಗು ತಜ್ಞರು ಬಂದು ನೀರಿನಲ್ಲಿ ಶೋಧನೆ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ಪಾಣೆಮಂಗಳೂರು ಗೂಡಿನಬಳಿಯ ಮುಳುಗುತಜ್ಞರ ತಂಡವನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಎಲ್ಲರೂ ಸೇರಿಕೊಂಡು ನಾಪತ್ತೆಯಾದ ಬಾಲಕನಿಗಾಗಿ ತಡರಾತ್ರಿಯ ತನಕ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಬೆಳಗ್ಗೆ ಮತ್ತೆ ಬಾಲಕನಿಗಾಗಿ ಹುಡುಕಾಟ ಆರಂಭಿಸಿದ ಮುಳುಗುತಜ್ಞರು ಘಟನಾ ಸ್ಥಳದ ಸಮೀಪವೇ ಮೃತದೇಹ ಪತ್ತೆ ಹಚ್ಚಿ ಮೇಲಕ್ಕೆತ್ತಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.