ಮರಳಿನ ಗುಂಡಿಯಲ್ಲಿ ಮುಂದುವರಿದ ಮರಣ ಮೃದಂಗ.!

KannadaprabhaNewsNetwork | Published : Mar 14, 2025 12:32 AM

ಸಾರಾಂಶ

ತುಂಗಭದ್ರೆಯ ಒಡಲು ಬಗೆದಿರುವ ಮರಳು ಅಕ್ರಮ ದಂಧೆಯಿಂದ, ಸಾಕಷ್ಟು ಸಾವಿನ ಗುಂಡಿಗಳಲ್ಲಿ ಅಮಾಯಕರ ಮರಣ ಮೃದಂಗ ಮುಂದುವರೆದಿದೆ.

ನಿಷೇಧವಿದ್ದರೂ ಮರಳು ಲೂಟಿ । ದೊಡ್ಡ ಗುಂಡಿ ನಿರ್ಮಾಣ

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತುಂಗಭದ್ರೆಯ ಒಡಲು ಬಗೆದಿರುವ ಮರಳು ಅಕ್ರಮ ದಂಧೆಯಿಂದ, ಸಾಕಷ್ಟು ಸಾವಿನ ಗುಂಡಿಗಳಲ್ಲಿ ಅಮಾಯಕರ ಮರಣ ಮೃದಂಗ ಮುಂದುವರೆದಿದೆ.

ಹೌದು, ತಾಲೂಕಿನ ಮದಲಗಟ್ಟಿ, ಹರವಿ, ಕುರುವತ್ತಿ, ಮೈಲಾರ, ನಂದಿಗಾವಿ, ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ಹೊನ್ನೂರು, ನವಲಿ, ಸೋವೇನಹಳ್ಳಿ, ಹಕ್ಕಂಡಿ, ಕಂದಗಲ್ಲು, ಪುರ ಸೇರಿದಂತೆ ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆಕೋರರು ಮರಳು ಲೂಟಿಯಿಂದ ದೊಡ್ಡ ಗುಂಡಿಗಳನ್ನು ನಿರ್ಮಿಸಿದ್ದಾರೆ.

ಇನ್ನೇಷ್ಟು ಬಲಿಬೇಕು?

ಮದಲಗಟ್ಟಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವರ ದರ್ಶನ ಬಂದು ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರಿನ ಸುಳಿಗೆ ಸಿಕ್ಕು ಮೃತಪಟ್ಟಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಶಿರಹಟ್ಟಿ ಯುವಕರು ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಲಕ್ಷ್ಮೇಶ್ವರದ ಯುವಕ ಮೃತಪಟ್ಟಿದ್ದಾನೆ.

ಘಟನೆ-1:

ಕಳೆದ 2008-09ನೇ ಸಾಲಿನಲ್ಲಿ ಹುಬ್ಬಳ್ಳಿ ಮೂಲದ ಮರಾಠ ಮನೆತನದ ಕುಟುಂಬದವರು, ತಮ್ಮ ಸಂಬಂಧಿಕರೊಬ್ಬರ ಅಸ್ತಿಯನ್ನು ಮದಲಗಟ್ಟಿ ಬಳಿಯ ತುಂಗಭದ್ರಾ ನದಿಯಲ್ಲಿ ಬಿಡಲು 16 ಜನ ಬಂದಿದ್ದರು. ಅಸ್ತಿಯನ್ನು ನದಿಗೆ ಬಿಡುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಕಾಲು ನೀರಿನಲ್ಲಿ ಮುಳುಗಿದರು. ಅವರನ್ನು ರಕ್ಷಣೆ ಮಾಡಲು ಮತ್ತೊಬ್ಬರು ಹೀಗೆ ಸರದಿ ಸಾಲಿನಂತೆ 9 ಜನ ಮೃತಪಟ್ಟಿದ್ದರು.

ಘಟನೆ-2:

ಕಳೆದ ಶನಿವಾರ ಶಿರಹಟ್ಟಿ ಗ್ರಾಮದ 5 ಯುವಕರು ಆಂಜನೇಯ ಸ್ವಾಮಿ ಸನ್ನಿಧಾನದಲ್ಲಿ ಜನ್ಮ ದಿನ ಆಚರಿಸಿಕೊಳ್ಳಲು ಬಂದು ದೇವರ ದರ್ಶನ ಪಡೆದ ಬಳಿಕ ಬಿಸಿಲಿನ ತಾಪ ತಾಳಲಾರದೇ, ನದಿಯಲ್ಲಿ ಹೋಗಿ ಸ್ನಾನ ಮಾಡಲು ಹೋಗಿದ್ದರು. ಶರಣಪ್ಪ ಎನ್ನುವ ವ್ಯಕ್ತಿ ಮೊದಲು ನೀರಿನಲ್ಲಿ ಇಳಿದಿದ್ದ. ನೀರಿನ ಸುಳಿಗೆ ಸಿಲುಕಿದ್ದ ಆತನ ರಕ್ಷಣೆ ಮಾಡಲು ಹೋದ ಇನ್ನಿಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಘಟನೆ-3:

ಬುಧವಾರ ಆಂಜನೇಯ ಸ್ವಾಮಿ ದರ್ಶನಕ್ಕೆ ಲಕ್ಷ್ಮೇಶ್ವರದಿಂದ ಮದಲಗಟ್ಟಿಗೆ ಬಂದಿದ್ದರು. ನದಿಯಲ್ಲಿ ಸ್ನಾನ ಮಾಡಲು ಹೋಗಿ ವಿನೋದ ಹಿರೇಮಠ(28) ಎಂಬ ಯುವಕ ನದಿ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಜರುಗಿದೆ. ಇನ್ನಿಬ್ಬರು ನದಿ ದಡದಲ್ಲೇ ಸ್ನಾನ ಮಾಡಿದ್ದರಿಂದ ಬದುಕಿ ಉಳಿದಿದ್ದಾರೆ.

ನಿಷೇಧಿತ ಪ್ರದೇಶದಲ್ಲೇ ಮರಳು ಸಾಗಾಟ!:

ಮದಲಗಟ್ಟಿ-ಕೊರ್ಲಹಳ್ಳಿ ಮಧ್ಯೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮದಂತೆ ಸೇತುವೆಯಿಂದ 1 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮರಳು ಸಾಗಾಟ ಹಾಗೂ ಗುಂಡಿಗಳ ನಿರ್ಮಾಣಕ್ಕೆ ನಿಷೇಧವಿದೆ. ಆದರೂ ಮದಲಗಟ್ಟಿ ಸೇತುವೆಯ ಪಕ್ಕದಲ್ಲೇ ದೊಡ್ಡ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ. ದೇಗುಲಕ್ಕೆ ಬಂದ ಭಕ್ತರು ಸ್ನಾನ ಮಾಡಲು ಹೋಗಿ ಮೃತರಾಗುತ್ತಿರುವುದು ದುರಂತದ ಸಂಗತಿ.

ಗ್ರಾಪಂ ಮತ್ತು ದೇಗುಲ ಅಧಿಕಾರಿಗಳ ನಿರ್ಲಕ್ಷ್ಯ?:

ಮದಲಗಟ್ಟಿ ಕೊಂಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ನದಿಯಲ್ಲಿ ಸುಳಿ ಇದೆ. ಯಾರೂ ನದಿಯಲ್ಲಿ ಈಜು ಹೋಗದಂತೆ ಎಚ್ಚರಿಕೆಯ ನಾಮಫಲಕವಿಲ್ಲ, ಮುಜರಾಯಿ ಇಲಾಖೆಗೆ ಸೇರ್ಪಡೆಯಾಗಿರುವ ಈ ದೇಗುಲದ ಅಧಿಕಾರಿಗಳು ಕೂಡಾ ದೇಗುಲಕ್ಕೆ ಬರುವ ಭಕ್ತರಿಗೆ ಕಾಣುವ ರೀತಿಯಲ್ಲಿ ಎಚ್ಚರಿಕೆಯ ನಾಮಫಲಕ ಹಾಕಿಲ್ಲ. ಈ ರೀತಿಯ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ಸಾವಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರವಾಸಿಗರು.

Share this article