ಎಸ್.ಜಿ. ತೆಗ್ಗಿನಮನಿಕನ್ನಡಪ್ರಭ ವಾರ್ತೆ ನರಗುಂದಹೋಳಿ ಹಬ್ಬದ ನಿಮಿತ್ತ ಕಾಮದಹನಕ್ಕೆ ಯುವಕರು ಪ್ಲಾಸ್ಟಿಕ್ ಸಂಗ್ರಹ ಮಾಡಿದ್ದರೆ, ಅಂತಹವುಗಳನ್ನು ಕಟ್ಟಿಗೆಯಿಂದ ಬೇರ್ಪಡಿಸುವ ಮೂಲಕ ಜಗದೀಶ ಗೊಂಡಬಾಳ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.ಪ್ರತಿ ವರ್ಷ ಹೋಳಿ ಹುಣ್ಣಿಮೆ ಹಬ್ಬದಲ್ಲಿ ಕಾಮ ದಹನ ಮಾಡಲಿಕ್ಕೆ ಪಟ್ಟಣ ಸೇರಿದಂತೆ ಗ್ರಾಮೀಣ ಮಕ್ಕಳು ಯುವಕರು ಗುಂಪು ಸೇರಿಕೊಂಡು ಹಗಲು, ರಾತ್ರಿ ಸಮಯದಲ್ಲಿ ಕಟ್ಟಿಗೆ ಜೊತೆ ವಾಹನಕ್ಕೆ ಬಳಕೆ ಮಾಡಿ ಬಿಟ್ಟಿರುವ ಟೈರ್, ಪ್ಲಾಸ್ಟಿಕ್ ತಗಡು ಸೇರಿದಂತೆ ವಿವಿಧ ರೀತಿಯ ಪ್ಲಾಸ್ಟಿಕ್ ಒಳಗೊಂಡಿರುವ ಕೆಲವು ಮನೆ ಅಲಂಕಾರಿಕ ವಸ್ತುಗಳನ್ನು ಕದ್ದು ತಂದು ಕಟ್ಟಿಗೆಯ ಸಂಗ್ರಹ ಮಾಡುತ್ತಾರೆ. ಪ್ರತಿ ಓಣಿಯ ಸ್ಥಳಕ್ಕೆ ಹೋಗಿ ಟೈರ್ ಮತ್ತು ಪ್ಲಾಸ್ಟಿಕ್‌ಗಳನ್ನು ಕಾಮ ದಹನ ಕಟ್ಟಿಗೆಯಿಂದ ಬೇರ್ಪಡಿಸಿ ಮಕ್ಕಳಿಗೆ ಮತ್ತು ಯುವಕರಿಗೆ ಇವುಗಳನ್ನು ಸುಡುವುದರಿಂದ ನಮ್ಮ ಪರಿಸರವನ್ನು ನಾವು ಹಾಳು ಮಾಡಿಕೊಳ್ಳುತ್ತೇವೆಂದು ಜಗದೀಶ ಜಾಗೃತಿ ಮೂಡಿಸುತ್ತಿದ್ದಾರೆ.
ಹೋಳಿ ಹಬ್ಬದಲ್ಲಿ ಮಕ್ಕಳು, ಯುವಕರು ಬಣ್ಣ ಎರಚಾಟದಲ್ಲಿ ರಾಸಾಯನಿಕ ಬಣ್ಣ (ವಾರ್ನಿಸ್) ಬಳಸುವುದನ್ನು ತಪ್ಪಿಸಲು ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಾಸಾಯನಿಕ ಬಣ್ಣ ಹಚ್ಚುವುದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಜನತೆ ರಾಸಾಯನಿಕ ಬಣ್ಣ ಬಳಸಬಾರದೆಂದು ಮನವಿ ಮಾಡಿಕೊಳ್ಳುತ್ತಾರೆ.
ಪರಿಸರ ಸೇವೆ: ಜಗದೀಶ ಪ್ರತಿ ದಿವಸ ಬೆಳಗಿನ ಜಾವ ಬಾಲಕಿಯರ ಪ್ರೌಢಶಾಲೆಯ ಕೊಠಡಿ, ಆವರಣ, ಶಾಲೆ ಚರಂಡಿ ಸ್ವಚ್ಛತೆ ಮಾಡಿ ಇದರ ಜೊತೆಗೆ ಮಕ್ಕಳಿಗೆ ಪರಿಸರ ಬೆಳೆಸುವುದರ ಬಗ್ಗೆ ಪಾಠ ಮಾಡುವರು. ಈ ಸಮಾಜ ಸೇವಕನಿಗೆ ಹಲವಾರು ಸಂಘ, ಸಂಸ್ಥೆಗಳು, ಮಠಮಾನ್ಯಗಳು ಹಲವು ಪ್ರಶಸ್ತಿ ನೀಡಿ ಗೌರವಿಸಿವೆ.ಪರಿಸರ ಹಾಳು ಮಾಡುವ ಟೈರ್ ಮತ್ತು ಪ್ಲಾಸ್ಟಿಕ್ ಗಳನ್ನು ಸುಡಬಾರದೆಂದು ಮಕ್ಕಳಿಗೆ ಮತ್ತು ಯುವಕರಿಗೆ ತಿಳಿಸಿ ಪರಿಸರ ರಕ್ಷಣೆ ಬಗ್ಗೆ ಹೋರಾಟ ಮಾಡುತ್ತಿದ್ದೇನೆ ಎಂದು ಸಮಾಜ ಸೇವಕ ಜಗದೀಶ ಗೊಂಡಬಾಳ ಹೇಳಿದರು.