ಕನ್ನಡಪ್ರಭ ವಾರ್ತೆ ದೇವದುರ್ಗ
ಬದುಕಿನಲ್ಲಿ ತಾಯಿ ಋಣ ಬಹು ದೊಡ್ಡದು,ನಿತ್ಯ ಸ್ಮರಣೆ ಮತ್ತು ಅವರ ಆಚಾರ-ವಿಚಾರಗಳನ್ನು,ಸಂಸ್ಕೃತಿಯನ್ನು,ಸಂಪ್ರದಾಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹೆತ್ತಿರುವ ತಾಯಿಗೆ ಪೂಜ್ಯನೀಯ ಗೌರವ ಸಲ್ಲಿಸಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಪಟ್ಟಣದ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಮಾತೋಶ್ರೀ ಬಸವಲಿಂಗಮ್ಮ ಮಾಲಿ ಪಾಟೀಲ್ ಮೆದರಗೋಳ ಪ್ರತಿಷ್ಠಾನ ಸಮಿತಿ ಆಯೋಜಿಸಿದ್ದ 3ನೇ ಪುಣಸ್ಮರಣೆ ಹಾಗೂ "ಕಲ್ಯಾಣ ರತ್ನ "ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಪಾತ್ರ ಹಾಗೂ ಅವರ ಸೇವೆ,ತ್ಯಾಗ ಪರಿಣಾಮಕಾರಿಯಾಗಿರುತ್ತದೆ. ನಮ್ಮ ಭವಿಷ್ಯ ನಿರ್ಮಾಣ ರೂಪಿಸುವದಕ್ಕಾಗಿ ತನ್ನೆಲ್ಲಾ ಜೀವನವನ್ನೇ ಮುಡುಪಾಗಿಟ್ಟು, ಲಾಲನೆ-ಪಾಲನೆ ಮಾಡಿ ಬೆಳೆಸಿರುತ್ತಾಳೆ. ಇಂಥ ಪವಿತ್ರ ಸ್ಥಾನ ಪಡೆದ ತಾಯಿಯನ್ನು ನಿತ್ಯ ಸ್ಮರಸಿದರೂ ಸಾಲದು.ಈ ನಿಟ್ಟಿನಲ್ಲಿ ಈ ಪ್ರತಿಷ್ಠಾನ ಸ್ಮರಣೋತ್ಸವದ ಜೊತೆಗೆ ಆದರ್ಶ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದರ ಮೂಲಕ ಅವರ ಸಾಧನೆಗಳು ಇತರರಿಗೆ ಸ್ಪೂರ್ತಿಯಾಗಲಿವೆ ಎಂದರು.
ಶಿಖರಮಠದ ಶ್ರೀ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶರಣಗೌಡ ಮಾಲೀ ಪಾಟೀಲ್ ಮೆದರಗೋಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಿ.ಎಸ್.ಪಾಟೀಲ್, ಪದವಿ ಕಾಲೇಜು ಪ್ರಾಚಾರ್ಯ ಸುಭಾಶ್ಚಂದ್ರ ಪಾಟೀಲ್ ಮಾತನಾಡಿದರು.ಪ್ರಶಸ್ತಿಗೆ ಬಾಜನರಾಗಿದ್ದ ಶಿಕ್ಷಣ ಪ್ರೇಮಿ, ಸರಳತೆಯ ಸಾಕಾರ ಮೂರ್ತಿ ಕಲಬುರಗಿಯ ಶ್ರೀ ಬಸವರಾಜ ಪಾಟೀಲ್ ಸೇಡಂರವರ ಅನುಪಸ್ಥಿತಿಯಲ್ಲಿ ಅವರ ಧರ್ಮಪತ್ನಿ ಬಸವಲಿಂಗಮ್ಮ ಪಾಟೀಲ್ ಸೇಡಂರಿಗೆ "ಕಲ್ಯಾಣ ರತ್ನ "ಪ್ರಶಸ್ತಿ ಹಾಗೂ 21 ಸಾವಿರ ಗೌರವ ಧನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಸೂಗಪ್ಪ ಸಾಹು ಚುಕ್ಕಿ ಸಿರವಾರ, ಮಲ್ಲಿಕಾರ್ಜುನ ಪಾಟೀಲ್ ಅಂಚೆಸೂಗೂರು, ಸಿ.ಎಸ್.ಪಾಟೀಲ್ ಜೊಳದಹೆಡ್ಗಿ, ಶರಣಬಸವ ಪಾಟೀಲ್ ಜೋಳದಹೆಡ್ಗಿ, ಭೀಮನಗೌಡ ಪಾಟೀಲ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ.ಮುನಿಯಪ್ಪ ನಾಗೋಲಿ, ಬಸವರಾಜ ಯಾಟಗಲ್ ನಿರೂಪಿಸಿದರು.