ಕನ್ನಡಪ್ರಭ ವಾರ್ತೆ ಕೋಲಾರ
ರಾಜ್ಯ ಸರ್ಕಾರದ ಯಾವುದೇ ತೀರ್ಮಾನ ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಪಕ್ಷದ ವಿಷಯದಲ್ಲಿ ತೀರ್ಮಾನಿಸುವ ಅಧಿಕಾರ ಹೈಕಮಾಂಡ್‌ಗೆ ಮಾತ್ರ ಇದೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬೇರೆ ಯಾವುದೇ ಮಾಹಿತಿ ನಮ್ಮ ಗಮನದಲ್ಲಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.ತಾಲೂಕಿನ ಮಂಗಸಂದ್ರ ಉತ್ತರ ವಿವಿ ವಿದ್ಯಾರ್ಥಿ ವಸತಿ ನಿಲಯದ ಗುದ್ದಲಿಪೂಜೆ ನೇರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,
೧೩೬ ಕಾಂಗ್ರೆಸ್ ಶಾಸಕರು ಹೈಕಮಾಂಡ್‌ನ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ಪಕ್ಷ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ, ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪ ನಮ್ಮ ಹಂತದಲ್ಲಿ ಇಲ್ಲ. ರಾಜಕೀಯ ತೀರ್ಮಾನ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ, ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ದ ಎಂದು ತಿಳಿಸಿದರು.ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ ಅನುದಾನಕ್ಕಾಗಿ ನ್ಯಾಯಾಲಯ ಮೊರೆಹೋದ ಕುರಿತು ಮಾತನಾಡಿ, ಈ ಹಿಂದೆ ಸರ್ಕಾರಗಳು ಅನುದಾನ ಬಿಡುಗಡೆ ಮಾಡುವುದರ ಬಗ್ಗೆ ಹೇಗೆ ನಡೆದುಕೊಂಡಿದ್ದವು ಎಂದು ಎಲ್ಲರಿಗೂ ತಿಳಿದಿದೆ. ರಾಜ್ಯಕ್ಕೆ ಕೈಗಾರಿಕೆ ಹಾಗೂ ಅನುದಾನ ಬಿಡುಗಡೆ ವಿಷಯದಲ್ಲಿ ಕೇಂದ್ರ ಸರ್ಕಾರ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ. ಎಐ ಕಂಪನಿಗಳನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಬೇಕೆಂದು ತೀರ್ಮಾನಿಸಿದ್ದರೂ, ಕೇಂದ್ರ ಸರ್ಕಾರದ ಒತ್ತಡದಿಂದ ಆಂಧ್ರಪ್ರದೇಶದ ಪಾಲಾಗಿದೆ. ಆದರೂ ರಾಜ್ಯ ಸರ್ಕಾರ ಅನುದಾನ ತರುವುದಕ್ಕಾಗಿ ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದೆ. ಈ ಹಿಂದೆ ೨೦೨೩ರಲ್ಲಿ ರಾಜ್ಯದಲ್ಲಿ ಬರ ಆವರಿಸಿದ್ದಾಗಲೂ ಕೇಂದ್ರ ಸರ್ಕಾರ ಸಹಕರಿಸದಿದ್ದಾಗ ಸುಪ್ರೀಂ ಕೋರ್ಟ್‌ಗೆ ಹೋಗಿ ಅನುದಾನ ಪಡೆದುಕೊಂಡಿದೆವು, ದೆಹಲಿಯಲ್ಲಿ ಪ್ರತಿಭಟನೆಯನ್ನೂ ಮಾಡಿದ್ದೆವು ಎಂದರು.
ರಾಜ್ಯ ಸರ್ಕಾರ ಆರ್‌ಎಸ್‌ಎಸ್ ನಿಷೇಧಿಸಿಲ್ಲ. ೨೦೧೩ರಲ್ಲಿ ಆಗಿನ ಸಿಎಂ ಜಗದೀಶ ಶೆಟ್ಟರ್ ಅವರು ನೀಡಿದ್ದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳು ಅನುಮತಿಯಿಲ್ಲದೆ ಕಾರ್ಯಕ್ರಮ ನಡೆಸಬಾರದು ಎಂಬ ಆದೇಶ ಈಗ ಜಾರಿಗೆ ತರಲಾಗಿದೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕುರಿತು ಮಾತನಾಡಿ, “ಸಾರ್ವಜನಿಕ ಜೀವನದಲ್ಲಿ ಭಾಷಾ ಪ್ರಯೋಗ ಎಚ್ಚರಿಕೆಯಿಂದ ಇರಬೇಕು. ವೈಯಕ್ತಿಕ ವಿಚಾರಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.---------------
ಬಾಕ್ಸಮುನಿಯಪ್ಪ ಸಿಎಂ ಹುದ್ದೆ ಕೇಳುವುದರಲ್ಲಿ ತಪ್ಪೇನಿದೆ: ಬೈರತಿ
ಸಚಿವ ಸಂಪುಟ ಕುರಿತು ಹೈಕಮಾಂಡ್ ಮತ್ತು ಸಿಎಂ, ಡಿಸಿಎಂ ತೀರ್ಮಾನಕ್ಕೆ ಬದ್ಧ. ಹೈಕಮಾಂಡ್ ಯಾವುದೇ ನಿರ್ಧಾರಕ್ಕೆ ನಾನು - ಸುಧಾಕರ್ ಬದ್ದರಾಗಿರುತ್ತೇವೆ. ಸಿಎಂ ಸಿದ್ದರಾಮಯ್ಯ ೫ ವರ್ಷ ಮುಂದುವರೆಯುವ ಬಗ್ಗೆಯೂ ಸಹ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.ದಲಿತ ಸಿಎಂ ಕುರಿತು ಪ್ರತಿಕ್ರಿಯಿಸಿ, ಜಾತಿ ಜನಾಂಗದ ಪರ ಕೇಳುವ ಹಕ್ಕು ಎಲ್ಲರಿಗೂ ಇದೆ. ಸಚಿವ ಸಂಪುಟ, ನಾಯಕತ್ವ ಬದಲಾವಣೆ ಎಲ್ಲಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಕೆ.ಎಚ್.ಮುನಿಯಪ್ಪ ಸಿಎಂ ರೇಸ್‌ನಲ್ಲಿರುವ ಕುರಿತು, ಅವರು ನಮ್ಮ ನಾಯಕರಾಗಿದ್ದು, ೭ ಬಾರಿ ಸಂಸದರಾಗಿದ್ದಾರೆ. ಎಂಎಲ್‌ಎ, ಸಚಿವರಾಗಿದ್ದಾರೆ. ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವೈ.ಶಿವಕುಮಾರ್ ಇದ್ದರು.