ಕನ್ನಡ ಮಾಧ್ಯಮ ಶಾಲೆಗಳ ಅವನತಿಗೆ ಆತ್ಮಾವಲಕೋನ ಅಗತ್ಯ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಹಿಂದಿನ ಮೈಸೂರು ರಾಜ್ಯ ಕರ್ನಾಟಕವಾಗಿ ಅರ್ಧ ಶತಮಾನವೇ ಸಂದಿದೆ. ಆದರೆ, ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಕನ್ನಡ ಭಾಷೆ, ವೈಶಿಷ್ಟ ಉಳಿಸುವ ಸಲುವಾಗಿ ಈ ಬಗ್ಗೆ ಎಲ್ಲರಲ್ಲೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಹಿಂದಿನ ಮೈಸೂರು ರಾಜ್ಯ ಕರ್ನಾಟಕವಾಗಿ ಅರ್ಧ ಶತಮಾನವೇ ಸಂದಿದೆ. ಆದರೆ, ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಈ ಬಗ್ಗೆ ಕನ್ನಡಿಗರಾದ ನಾವುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ಶುಕ್ರವಾರ ಸಂಜೆ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡವನ್ನು ಅನ್ನದ ಭಾಷೆ ಆಗಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.

ಕನ್ನಡಿಗರಿಗರಾದ ನಮಗೆ ಅನ್ಯಭಾಷಾ ವ್ಯಾಮೋಹ ಹೆಚ್ಚುತ್ತಿರುವ ಕಾರಣ ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಈ ಕುರಿತಂತೆ ಸರ್ಕಾರ ಮಾತ್ರವಲ್ಲದೇ ಕನ್ನಡಿಗರಾದ ನಾವುಗಳು ಕೂಡ ಭಾಷೆ ಉಳಿಸುವ ಕುರಿತಂತೆ ಕನ್ನಡತನವನ್ನು ಮೈಗೂಡಿಸಿಕೊಂಡು ಸ್ವಾಭಿಮಾನಿಗಳಾಗುವ ಅಗತ್ಯವಿದೆ ಎಂದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಈ ತಾಲೂಕು ಕುವೆಂಪು ಹಾಗೂ ಯು.ಆರ್. ಅನಂತಮೂರ್ತಿ ಅವರ ಮೂಲಕ ಎರಡು ಜ್ಞಾನಪೀಠ ಪ್ರಶಸ್ತಿ ಪಡೆದಿದೆ. ವಿದ್ಯಾರ್ಥಿಗಳಿಲ್ಲದೇ ಸೊರಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಅನಿವಾರ್ಯತೆಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸುತ್ತಿದ್ದೇವೆ. ಕನ್ನಡ ಮಾಧ್ಯಮ ಶಿಕ್ಷಣವನ್ನು ಸಶಕ್ತಗೊಳಿಸುವ ಪ್ರಯತ್ನ ಎಲ್ಲ ಕ್ಷೇತ್ರಗಳಲ್ಲಿ ಆಗಬೇಕಿದೆ. ಸಾಮೂಹಿಕ ಪ್ರಯತ್ನದಿಂದ ಮಾತ್ರ ಈ ಕೆಲಸ ಸಾಧ್ಯ ಎಂದೂ ಹೇಳಿದರು.

ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ತಾಲೂಕಿನ ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತರ ಸಾಹಿತ್ಯವನ್ನು ನಾವುಗಳು ಓದುವ ಮೂಲಕ ನಮ್ಮ ಬೌದ್ಧಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.

ಅಧ್ಯಕ್ಷತೆಯನ್ನು ಪ.ಪಂ. ಅಧ್ಯಕ್ಷೆ ಗೀತಾ ರಮೇಶ್ ವಹಿಸಿದ್ದರು. ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಪಪಂ ಸದಸ್ಯರು, ಪಪಂ ಮುಖ್ಯಾಧಿಕಾರಿ ಕುರಿಯಾ ಕೋಸ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಜೆ.ಅಶ್ವಥ್ ಗೌಡ ಉಪಸ್ಥಿತರಿದ್ದರು.

ಇದೇ ವೇಳೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತರಗತಿಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಗಳಿಸಿದ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು. ನಗೆಹಬ್ಬ ನೃತ್ಯ ವೈಭವ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದಲ್ಲಿ ವಿವಿಧ ವೇಷಭೂಷಣಗಳ ಸ್ಥಬ್ದಚಿತ್ರದೊಂದಿದೆ ಸಾಂಸ್ಕೃತಿಕ ನಡಿಗೆ ಸಂಪನ್ನಗೊಂಡಿತು.

- - - ಬಾಕ್ಸ್‌ ಬೌದ್ಧಿಕ ಶೋಷಣೆ ಆತಂಕಕಾರಿ: ಕವಿರಾಜ್‌ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ವಿಶ್ವಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಇಂದು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಆದರೆ, ಈಚಿನ ದಿನಗಳಲ್ಲಿ ದಾರ್ಶನಿಕ ಕವಿಯ ಆಶಯಕ್ಕೆ ವಿರುದ್ಧವಾಗಿ ಧರ್ಮದ ಅಮಲಿನಲ್ಲಿ ಮನುಷ್ಯರನ್ನು ವಂಚಿಸುವ ಮತ್ತು ಬೌದ್ಧಿಕ ಶೋಷಣೆ ಆತಂಕಕಾರಿಯಾಗಿದೆ. ಧರ್ಮ ದೇವರ ಹೆಸರಿನಲ್ಲಿ ಮುಗ್ದರನ್ನು ವಂಚಿಸಿ, ದಿಕ್ಕು ತಪ್ಪಿಸುವ ಅವಕಾಶವಾದಿಗಳ ತಂತ್ರಗಾರಿಕೆಗೆ ಕಡಿವಾಣ ಹಾಕಬೇಕಿದೆ ಎಂದರು.

- - - -30ಟಿಟಿಎಚ್‌01:

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ಗೋಪಾಲಗೌಡ ರಂಗಮಂದಿರದಲ್ಲಿ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉಧ್ಘಾಟಿಸಿದರು.

Share this article