ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:
ನಾಲೆಯಲ್ಲಿ ತುಂಬಿರುವ ಹೂಳೆ ತೆಗೆಯಲು ಇನ್ನು ಕೆಲವೇ ದಿನಗಳಲ್ಲಿ ನಾಲೆಯ ಮೇಲೆ ನಿರ್ಮಿಸಿರುವ ಕಮರಿಪೇಟೆ ಪೊಲೀಸ್ ಠಾಣೆಯನ್ನು ನೆಲಸಮಗೊಳಿಸಿ ಬೇರೆಡೆ ಸ್ಥಳಾಂತರಿಸಲು ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.ಇಲ್ಲಿನ ಹರ್ಷಾ ಮಳಿಗೆಯಿಂದ ಕಮರಿಪೇಟೆ ವರೆಗಿನ ಸುಮಾರು 2 ಕಿಮೀ ವ್ಯಾಪ್ತಿಯ ನಾಲೆಯನ್ನು ಕಳೆದ 30-40 ವರ್ಷಗಳಿಂದ ಸಮರ್ಪಕವಾಗಿ ಹೂಳು ತೆಗೆಯದಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ನಾಲೆ ಎಲ್ಲಿದೆ ಎಂಬುದೇ ಗುರುತು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಾಲೆಯು ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆ ಪ್ರದೇಶದೊಳಗೆ ಹಾದು ಹೋಗಿದೆ. ಮೇಲಾಗಿ ಇದರ ಮೇಲೆಯೇ 600 ಮೀಟರ್‌ಗೂ ಅಧಿಕ ರಸ್ತೆಯನ್ನು ನಿರ್ಮಿಸಿದರೆ, ಇನ್ನು ಕೆಲವೆಡೆ 20ಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳು ಹಾಗೂ ಕಮರಿಪೇಟೆಯ ಪೊಲೀಸ್ ಠಾಣೆ ನಿರ್ಮಿಸಲಾಗಿದೆ. ಈ ನಾಲೆಯ ನಿರ್ಮಾಣ ಹಲವು ವರ್ಷಗಳ ಹಿಂದೆಯೇ ನಡೆದಿದ್ದು, ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಇದರ ಸಮರ್ಪಕ ನಿರ್ವಹಣೆ ಇಲ್ಲದೆ ಇರುವುದರಿಂದ ಈಗಾಗಲೇ ಹೂಳು ತುಂಬಿ ಸಂಪೂರ್ಣ ಹಾಳಾಗಿ ಹೋಗಿದೆ.ನಾಲೆಯ ಮೇಲೆಯೇ ಪೊಲೀಸ್ ಠಾಣೆ:
ಇಲ್ಲಿನ ಕಮರಿಪೇಟೆ ಪೊಲೀಸ್ ಠಾಣೆಯನ್ನು ಈ ನಾಲೆಯ ಮೇಲೆಯೇ ನಿರ್ಮಿಸಲಾಗಿದ್ದು, ಇದನ್ನು ತೆರವಿಗೆ ಪಾಲಿಕೆ ಸಿದ್ಧತೆ ನಡೆಸಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದು, ಮೇ 15ರಂದು ಠಾಣೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಆಗಮಿಸಿ ಠಾಣೆಯನ್ನು ಪರಿಶೀಲಿಸಿ ಬೇರೆಡೆ ಠಾಣೆ ಸ್ಥಳಾಂತರಕ್ಕೆ ಸೂಚನೆ ಸಹ ನೀಡಿದ್ದಾರೆ.ಎರಡು ಕಡೆ ಜಾಗ ನಿಗದಿ:
ಈಗಿರುವ ಕಮರಿಪೇಟೆಯ ಪೊಲೀಸ್ ಠಾಣೆಯನ್ನು ಬೇರೆಡೆ ಸ್ಥಳಾಂತರಿಸಲು ಈಗಾಗಲೇ ಎರಡು ಕಡೆ ಜಾಗ ಗುರುತಿಸಿದ್ದಾರೆ. ಈ ಠಾಣೆಯ ಹತ್ತಿರದಲ್ಲಿರುವ ಜಿಗಳೂರು ಕಲ್ಯಾಣ ಮಂಟಪ ಹಾಗೂ ಜಯಭಾರತ ವೃತ್ತದಲ್ಲಿರುವ ಪಾಲಿಕೆ ಸಮುದಾಯ ಭವನಕ್ಕೆ ಸ್ಥಳಾಂತರಕ್ಕೆ ಉದ್ದೇಶಿಸಿದ್ದು, ಈ ಕುರಿತು ಶೀಘ್ರವೇ ಪಾಲಿಕೆಯಿಂದ ಪೊಲೀಸ್ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಸಿದ್ಧತೆ ನಡೆದಿದೆ.ಅಲ್ಪ ಮಳೆಯಾದರೂ ಸಂಕಷ್ಟ:
ಈ ನಾಲೆ ಸಂಪೂರ್ಣವಾಗಿ ಹೂಳು ತುಂಬಿರುವ ಹಿನ್ನೆಲೆಯಲ್ಲಿ ಅಲ್ಪ ಮಳೆಯಾದರೂ ಇಲ್ಲಿನ ರಸ್ತೆಗಳೆಲ್ಲ ಕೆರೆಯಂತಾಗುತ್ತವೆ. ಚರಂಡಿ ನೀರೆಲ್ಲ ಅಂಗಡಿಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ಇದರಿಂದಾಗಿ ಇಲ್ಲಿನ ವ್ಯಾಪಾರಸ್ಥರು ಈ ಅವಾಂತರದಿಂದಾಗಿ ಶಾಶ್ವತ ಪರಿಹಾರಕ್ಕಾಗಿ ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಈಗ ಎಚ್ಚೆತ್ತುಕೊಂಡಿರುವ ಪಾಲಿಕೆ ಈ ನಾಲೆಯ ಮೇಲೆ ನಿರ್ಮಿಸಿರುವ ರಸ್ತೆ, ಮಳಿಗೆ ಹಾಗೂ ಠಾಣೆಯ ತೆರವಿಗೆ ಸಿದ್ಧತೆ ನಡೆಸಿದೆ.ಹರ್ಷಾ ಮಳಿಗೆಯಲ್ಲಿರುವ ಹಾಗೂ ಮೀನು ಮಾರುಕಟ್ಟೆಯ ವ್ಯಾಪಾರಸ್ಥರು ಮೀನು ಸಂಗ್ರಹಿಸುವ ಥರ್ಮಾಕೋಲ್, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಇದೇ ನಾಲೆಯಲ್ಲಿಯೇ ಎಸೆಯುತ್ತಿದ್ದಾರೆ. ಸುತ್ತಮುತ್ತಲಿನ ನಿವಾಸಿಗಳೂ ಇದರಲ್ಲೇ ತ್ಯಾಜ್ಯ ಎಸೆಯುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಿ ಮೀನು ಮಾರುಕಟ್ಟೆ ಹಾಗೂ ಹರ್ಷ ಮಳಿಗೆಯ ಪಕ್ಕದಲ್ಲಿ ಪಾಲಿಕೆಯಿಂದ ತ್ಯಾಜ್ಯ ಸಂಗ್ರಹಿಸುವ ವಾಹನ ನಿಲ್ಲಿಸಿದರೂ ನಾಲೆಯಲ್ಲಿ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿಲ್ಲ. ಇದರಿಂದಾಗಿಯೇ ಸರಾಗವಾಗಿ ನೀರು ಹರಿದು ಹೋಗದೇ ನಾಲೆಯಲ್ಲಿ ಹೂಳುತುಂಬಿಕೊಂಡು ನೀರು ಹರಿಯದಂತಾಗಿದೆ ಎಂಬುದು ಪಾಲಿಕೆಯ ಅಧಿಕಾರಿಗಳ ಮಾತು. ದ್ರೋಣ್ ಮೂಲಕ ಸಮೀಕ್ಷೆ
ಹುಬ್ಬಳ್ಳಿಯ ಹರ್ಷಾ ಮಳಿಗೆಯಿಂದ ಆರಂಭವಾಗುವ ಈ ನಾಲೆಯು ಗಣೇಶ ಪೇಟೆ, ಕೊಪ್ಪಿಕರ ರಸ್ತೆ, ಹೊಸ ಮ್ಯಾದರ ಓಣಿ, ತುಳಜಾಭವಾನಿ ದೇವಸ್ಥಾನ ಪಕ್ಕದ ಸಹಸ್ರಾರ್ಜುನ ವೃತ್ತ, ದಾಜಿಬಾನ್ ಪೇಟೆ ವೃತ್ತ, ಕಮರಿಪೇಟೆಯ ವರೆಗೆ ಸುಮಾರು 2 ಕಿಮೀ ವ್ಯಾಪ್ತಿ ಹೊಂದಿದೆ. ಈಗಾಗಲೇ ಈ ನಾಲೆಯ ಕುರಿತು ದ್ರೋಣ್ ಮೂಲಕ ಸಮೀಕ್ಷೆ ನಡೆಸಿ ನಾಲೆಯ ಅಭಿವೃದ್ಧಿಗೆ ₹40 ಕೋಟಿ ವೆಚ್ಚದ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗಿದೆ. ಲೋಕಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸರ್ಕಾರದಿಂದ ಅನುಮೋದನೆ ಪಡೆದು ಕಾಮಗಾರಿಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಕನ್ನಡಪ್ರಭಕ್ಕೆ ತಿಳಿಸಿದರು.ನಾಲೆಯ ಹೂಳು ತೆಗೆಯಲು ಈಗಾಗಲೇ ದ್ರೋಣ್ ಮೂಲಕ ಸರ್ವೇ ನಡೆಸಿ ಯೋಜನಾ ವರದಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಲೆಯ ಮೇಲಿರುವ ಪೊಲೀಸ್ ಠಾಣೆಯ ಸ್ಥಳಾಂತರ ಕುರಿತು ಚರ್ಚಿಸಲಾಗಿದೆ. ಶೀಘ್ರವೇ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.