ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸಮೀಪದ ಕುಂಬಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಟ್ಟೂರು ಗ್ರಾಮದಲ್ಲಿ ಎಂಟು ವರ್ಷಗಳಿಂದ ಸಹಕಾರ ಸಂಘದ ಅಧೀನದ ಉಗ್ರಾಣವು ಅಪೂರ್ಣ ಸ್ಥಿತಿಯಲ್ಲಿದ್ದು, ಸಹಕಾರ ಇಲಾಖೆ ಮೌನವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಗ್ರಾಮದ ಮುಖಂಡರು, ಶಾಸಕರಿಗೆ ಒತ್ತಡ ಹೇರಿ ಉಗ್ರಾಣವನ್ನು ನಿರ್ಮಾಣ ಮಾಡಿ ಹಲವು ವರ್ಷಗಳೇ ಕಳೆದಿದ್ದು, ಕಳಪೆ ಕಾಮಗಾರಿ ಎಂದು ಹೇಳಲಾಗಿದೆ. ಅಲ್ಲದೇ ೩೦*೬೦ ಅಳತೆಯ ಈ ಉಗ್ರಾಣವು ಸಿಮೆಂಟ್ ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದು ಮಳೆಯಿಂದ ಸೋರಿಕೆಯಾಗಿ ಗೋಡೆಯು ಕಪ್ಪಾಗಿ ಕಾಣುತ್ತಿದೆ. ಕದಗಳೇ ಇಲ್ಲದ ಈ ಗೋಡೌನ್‌ನಲ್ಲಿ ಸ್ಥಳೀಯ ರೈತರೊಬ್ಬರು ಒಣ ಹುಲ್ಲಿನ ಪೆಂಡಿಯನ್ನು ದಾಸ್ತಾನು ಮಾಡಿದ್ದಾರೆ. ಅಲ್ಲದೇ ಇಲಿ ಹೆಗ್ಗಣ, ಜಿರಲೆ, ಝರಿ, ಚೇಳುಗಳ ವಾಸಸ್ಥಾನವಾಗಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆದರೂ ಯಾರೂ ಕೇಳುತಿಲ್ಲ.
ನಿಟ್ಟೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅವಧಿ ಕಳೆದ ಜನವರಿ ೩ಕ್ಕೆ ಮುಕ್ತಾಯವಾಗಿದ್ದು, ವಲಯದ ಕ್ಷೇತ್ರಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ಇಲಾಖೆ ನೇಮಕ ಮಾಡಿದೆ. ಆಡಳಿತ ಮಂಡಳಿ ಇರುವಾಗಲೇ ಒಬ್ಬ ವ್ಯಕ್ತಿಗೆ ದುರಸ್ತಿ ಮತ್ತು ನಿರ್ವಹಣೆ ನೀಡಲು ಮಾತುಕತೆಯಾಗಿದ್ದು, ಆ ವ್ಯಕ್ತಿ ಬಾರದೇ ಈ ಉಗ್ರಾಣಕ್ಕೆ ಕ್ಯಾರೇ ಎನ್ನುವವರು ಯಾರೂ ಇಲ್ಲದಾಗಿದೆ.೬೦೦೦ ಜನಸಂಖ್ಯೆ ಹೊಂದಿದ ಈ ಗ್ರಾಮದಲ್ಲಿ ಬಹುತೇಕರು ವಿದ್ಯಾವಂತರಿದ್ದು ಉಗ್ರಾಣದ ಪುನಶ್ಚೇತನಕ್ಕೆ ಕಾಳಜಿ ಇಲ್ಲದಾಗಿದೆ, ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಪ್ರಜ್ಞಾವಂತ ಜನರು ಕೂಡಲೇ ಜಾಗೃತರಾಗಿ ಟೊಂಕಕಟ್ಟಿ ಉಗ್ರಾಣದ ಪೂರ್ಣ ಪ್ರಮಾಣದ ದುರಸ್ತಿಗೆ ಮುಂದಾಗಬೇಕಿದೆ. ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕಾದ, ತಮ್ಮ ಹಕ್ಕುಗಳಿಗೆ ಹೋರಾಟ ಮಾಡುವ ಸಂಘ-ಸಂಸ್ಥೆಗಳ, ಜನಪ್ರತಿನಿಧಿಗಳ ಪಾತ್ರವೇನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎಂಬ ಸಹಕಾರ ತತ್ವ ಬರೀ ಓದುವಂತಾಗಿದೆ.
ಆಡಳಿತ ಮಂಡಳಿ ಇರುವಾಗಲೇ ರಾಜಕಾರಣಿಗಳಿಂದ ಉಗ್ರಾಣ ಅಭಿವೃದ್ಧಿ ಮಾಡಿದ್ದಾರೆ. ಪ್ರಸ್ತುತ ನಿಟ್ಟೂರು ಗ್ರಾಮದ ಸಹಕಾರ ಸಂಘದ ಆಡಳಿತ ಮಂಡಳಿ ಅವಧಿ ಮುಕ್ತಾಯವಾಗಿದೆ. ಅಭಿವೃದ್ಧಿಗೆ ಅನುದಾನ ಸಿಕ್ಕಿರೆ ಉಗ್ರಾಣ ಪೂರ್ಣ ಕಾಮಗಾರಿ ನಡೆಯುತ್ತಿತ್ತು. ಅನುದಾನ ಸಿಕ್ಕಿಲ್ಲ. ಉಗ್ರಾಣದ ಕಾಮಗಾರಿಗೆ ಟೆಂಡರ್ ಪಡೆದುಕೊಂಡವರೂ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡಿಲ್ಲ. ಶೀಘ್ರವೇ ಈ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಪ್ರಕ್ರಿಯೆ ಆರಂಭಿಸಬೇಕು.ಲೋಕೇಶ್ ನಾಯ್ಕ್ ಸಂಘದ ಆಡಳಿತಾಧಿಕಾರಿ
ಕಳೆದ ಏಳು ವರ್ಷಗಳಿಂದ ಈ ಉಗ್ರಾಣವು ರೈತರಿಗೆ ಉಪಯೋಗವಾಗದೇ ವ್ಯರ್ಥವಾಗಿದ್ದು, ಸಂಭಂಧಿಸಿದ ಇಲಾಖೆ ಅಧಿಕಾರಿಗಳು ಕಾಳಜಿವಹಿಸಿ ಉಗ್ರಾಣವನ್ನು ಪೂರ್ಣ ಮಾಡಿ ರೈತರಿಗೆ ಅನುಕೂಲ ಮಾಡಕೊಡಬೇಕು.ಹನುಮಂತಪ್ಪ, ರೇವಣಪ್ಪ ಗ್ರಾಮಸ್ಥರು