ಕನ್ನಡಪ್ರಭ ವಾರ್ತೆ ಮಾಲೂರು
ಬೀದಿಬದಿ ವ್ಯಾಪಾರಿಗಳಿಗೆ ಜಿಎಸ್ಟಿ
ಪುರಸಭೆಯು ಬೀದಿ ಬದಿ ಅಂಗಡಿಯವರಿಂದ ನಿತ್ಯ ವಸೂಲಿ ಮಾಡುವ ಶುಲ್ಕಕ್ಕೆ ಜಿಎಸ್‌ಟಿ ಸೇರಿಸಿ ಪಡೆಯುತ್ತಿರುವುದನ್ನು ಗಮನಿಸಿದ ಉಪಲೋಕಾಯುಕ್ತರು, ಯಾವ ಪುರಸಭೆ ಆಡಳಿತ ಪುಸ್ತಕದಲ್ಲಿ ಈ ಕಾನೂನು ಇದೆ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಇನ್ನು ಮುಂದೆ ಬೀದಿ ಬದಿ ಅಂಗಡಿಯವರಿಂದ ಜಿಎಸ್‌ಟಿ ಪಡೆದರೆ ಕ್ರಿಮಿನಲ್ ಮೊಕದ್ದಮೆ ಹಾಕುವುದಾಗಿ ಎಚ್ಚರಿಸಿದರು.ಬಿ.ಖಾತೆ ಸೇರಿದಂತೆ ಇತರೆ ಪುರಸಭೆ ಸೇವೆಗಳಿಗೆ ಹೆಚ್ಚು ಹಣ ಪೀಕುತ್ತಾರೆ ಎಂದು ಇಲ್ಲಿನ ಕಂದಾಯ ಅಧಿಕಾರಿ ರೇಣುಕಾ ಮೇಲೆ ಹೆಚ್ಚು ದೂರು ಇದ್ದ ಕಾರಣ ಆ ಅಧಿಕಾರಿಯ ಮೊಬೈಲ್ ಪೋನ್ ವಶಪಡಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಅದರಲ್ಲಿ ನಿರಂತರವಾಗಿ ಹತ್ತಾರು ಸಾವಿರ ರು.ಗಳ ವಹಿವಾಟು ನಡೆಸಿರುವುದನ್ನು ಪತ್ತೆ ಮಾಡಿದರು. ಈ ಬಗ್ಗೆ ಪ್ರಶ್ನಿಸಿ ಆ ಅಧಿಕಾರಿಯ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದರು.
ತಾಲೂಕು ಕಚೇರಿಯು ಕೆರೆಗಳನ್ನು ನುಂಗಿ ನಿವೇಶನ ಮಾಡುತ್ತಿರುವ ಬಗ್ಗೆ ಬಂದ ದೂರುಗಳ ಬಗ್ಗೆ ಪ್ರಶ್ನಿಸಿದ ಉಪಲೋಕಾಯುಕ್ತರು, ಒಂದು ವೇಳೆ ಇದನ್ನು ಸರಿಪಡಿಸದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ೧೫೫ ಕೆರೆಗಳ ಒತ್ತುವರಿ ತೆರವು ಮಾಡಿರುವುದಾಗಿ ತಹಸೀಲ್ದಾರ್ ರೂಪ ನೀಡಿದ ಉತ್ತರಕ್ಕೆ, ಉಳಿದ ಕೆರೆಯನ್ನೂ ಉಳಿಸಿ ತಮಗೆ ವರದಿ ನೀಡುವಂತೆ ಸೂಚಿಸಿದರು.
ಪಟ್ಟಣದ ಮೂರು ಕಚೇರಿಗಳಿಗೆ ಧಾಳಿ ನಡೆಸಿದ ನಂತರ ಪತ್ರಕರ್ತರೂಡನೆ ಮಾತನಾಡುತ್ತ ಮಾಲೂರು ಬೆಂಗಳೂರಿಗೆ ಹತ್ತಿರ ಇರುವುದರಿಂದ ಇಲ್ಲಿ ಕೋಟಿ ಲೆಕ್ಕದಲ್ಲಿ ವ್ಯವಹಾರ ನಡೆಯುತ್ತಿದೆ. ಒಳ್ಳೆ ಕಂದಾಯ ಸಂಗ್ರಹವಾಗುತ್ತಿದೆ. ಇಲ್ಲಿಯ ಸರ್ಕಾರಿ ಅಧಿಕಾರಿಗಳು ಲಾಬಿಗಳ ಜತೆ ಶಾಮೀಲಾಗಿದ್ದಾರೆ. ಅಧಿಕಾರಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು ಅವರ ಜಾತಕವನ್ನು ಪರಿಶೀಲಿಸಲಾಗುವುದು ಎಂದರು.