ಹಾವೇರಿ: ಕಳಪೆ ಕಾಮಗಾರಿ ಹೌದೋ ಅಲ್ಲವೋ ಎಂಬುದನ್ನು ಪರಿಣಿತರು ನಿರ್ಣಯಿಸಬೇಕು. ಕಾಮಗಾರಿ ಕಳಪೆ ಎಂದು ನೀವೇ ಹೇಗೆ ನಿರ್ಣಯಿಸುತ್ತೀರಿ. ಯಾವುದೋ ದೂರು ದಾಖಲಿಸುತ್ತೀರಿ. ಆದರೆ, ಸರಿಯಾದ ದಾಖಲೆ ಕೊಡೋದಿಲ್ಲ, ದಾಖಲೆ ಕೇಳಿದ್ರೆ ದೂರು ವಾಪಸ್ ಪಡೆಯುತ್ತೇನೆ ಎನ್ನುತ್ತೀರಿ. ಹೀಗೆ ಲೋಕಾಯುಕ್ತವನ್ನು ದುರುಪಯೋಗಪಡಿಸಿಕೊಂಡಿದ್ದೀರಿ ಎಂದು ನಿಮ್ಮ ಮೇಲೆ ಪ್ರಕರಣ ದಾಖಲಿಸಿ ನಾವೇಕೆ ನಿಮ್ಮನ್ನು ಜೈಲಿಗೆ ಕಳಿಸಬಾರದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಕಿಡಿ ಕಾರಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಉಪ ಲೋಕಾಯುಕ್ತ ವ್ಯಾಪ್ತಿಯ ಹಾವೇರಿ ಜಿಲ್ಲೆಯ ಬಾಕಿ ಇರುವ ದೂರುಗಳ ವಿಚಾರಣೆ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ, ಪ್ರಕರಣಗಳ ವಿಚಾರಣೆ ನಡೆಸಿದ ಅವರು ಕಳಪೆ ಕಾಮಗಾರಿ, ರಸ್ತೆ ಅತಿಕ್ರಮಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿ, ಸರಿಯಾಗಿ ದಾಖಲೆ ಸಲ್ಲಿಸಿದ ಹಾಗೂ ದೂರು ವಾಪಸ್ ಪಡೆದ ದೂರುದಾರರ ವಿರುದ್ಧ ಹರಿಹಾಯ್ದರು.ರುದ್ರಗೌಡ ಎಂಬುವರು ಹಿರೇಕೆರೂರಿನ ರಸ್ತೆ ಕಳಪೆ ಎಂದು ದೂರು ಕೊಟ್ಟಿದ್ದರು. ಅದಕ್ಕಾಗಿ ಬೆಂಗಳೂರಿನಿಂದ ಹಿರೇಕೆರೂರವರೆಗೆ ಮೂರು ಬಾರಿ ಲೋಕಾಯುಕ್ತ ತಾಂತ್ರಿಕ ತಂಡ ಪರಿಶೀಲನೆ ನಡೆಸಿ ದೂರಿನಲ್ಲಿ ಹುರುಳಿಲ್ಲ ಎಂದು ದೃಢಪಡಿಸಿತ್ತು. ಆ ಬಗ್ಗೆ ವಿಚಾರಣೆ ನಡೆಯುವಾಗ ದೂರನ್ನು ಹಿಂಪಡೆಯುತ್ತೇನೆ ಎಂದು ರುದ್ರಗೌಡ ತಿಳಿಸಿದರು. ಆಗ ಉಪಲೋಕಾಯುಕ್ತರು ತೀವ್ರವಾಗಿ ಹರಿಹಾಯ್ದರು.ಪ್ರಕರಣ ದಾಖಲಿಸುವ ಮುನ್ನ ಎಚ್ಚರಿಕೆ ಇರಲಿ, ಈ ಕುರಿತು ತಪ್ಪೊಪ್ಪಿಗೆ ಪತ್ರ ಬರೆದುಕೊಡಿ, ಜೀವನದಲ್ಲಿ ಇನ್ಮುಂದೆ ಇಂಥ ದೂರು ದಾಖಲಿಸಲ್ಲ ಎಂದು ನಮೂದಿಸಿ ಎಂದು ತಾಕೀತು ಮಾಡಿದರು.ಅಧಿಕಾರಿಗಳ ಮೇಲೆ ಕ್ರಮ: ಕಾಮಗಾರಿ ಮಾಡದೆ ಹಣ ಡ್ರಾ ಮಾಡಿದ ಕುರಿತು, ಕಡಿಮೆ ಬೆಲೆಗೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಅಧಿಕ ಮೊತ್ತಕ್ಕೆ ಬಿಲ್ ಹಾಕಿದ ಬಗ್ಗೆ, ವಾರಸುದಾರರು ಅಲ್ಲದವರನ್ನು ವಾರಸಾ ಪತ್ರದಲ್ಲಿ ಹೆಸರು ಸೇರ್ಪಡೆ ಬಗ್ಗೆ, ತುಂಗಾ ಮೇಲ್ದಂಡೆ ಯೋಜನೆ ಕಳಪೆ ಕಾಮಗಾರಿ, ರಸ್ತೆ ಅತಿಕ್ರಮಣ, ಕಾಮಗಾರಿ ಮಂದಗತಿ, ಕೆರೆ ಕಟ್ಟೆ ಹಾಳುಮಾಡಿದ ಬಗ್ಗೆ, ವೈಜ್ಞಾನಿಕವಾಗಿ ಸೇತುವೆ ಎತ್ತರ ಮಾಡಿದ್ದರಿಂದ ರೈತರ ಬೆಳೆಹಾನಿ, ಅನಧಿಕೃತ ಕಟ್ಟಡ ಸೇರಿದಂತೆ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿದ ಉಪ ಲೋಕಾಯುಕ್ತರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಒಂದು ತಿಂಗಳೊಳಗಾಗಿ ನೀಡದಿದ್ದರೆ ಅಧಿಕಾರಿಗಳ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಅಧಿಕಾರಿಗಳಲ್ಲಿ ಗತ್ತು ಇರಬೇಕು...ದೂರುದಾರರಿಗೆ ಉತ್ತರ ನೀಡುವಷ್ಟು ಅಧಿಕಾರಿಗಳಿಗೆ ಗತ್ತು ಇರಬೇಕು, ಇಲ್ಲಿಗೆ ಬರುವ ಮೊದಲು ಪ್ರಕರಣದ ಮಾಹಿತಿ ಪಡೆದುಕೊಂಡು ಬರಬೇಕು. ಇಲ್ಲಿ ಬಂದು ತಡಬಡಾಯಿಸಬಾರದು. ಬದ್ಧತೆಯಿಂದ ಕೆಲಸಮಾಡಬೇಕು. ಯಾರಿಗೂ ಹೆದರದೆ ಕಾನೂನಿನ ಪ್ರಕಾರ ಕೆಲಸ ಮಾಡಿದಲ್ಲಿ ಇಂತಹ ಸನ್ನಿವೇಶಗಳು ಬರುವುದಿಲ್ಲ ಎಂದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್ಪಿ ಅಂಶುಕುಮಾರ, ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ.ರಾಜಶೇಖರ, ಪಿ.ಶ್ರೀನಿವಾಸ ಹಾಗೂ ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರಾದ ಅರವಿಂದ ಎನ್.ವಿ. ಕರ್ನಾಟಕ ಲೋಕಾಯುಕ್ತ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ, ಡಿಎಸ್‌ಪಿ ಬಿ.ಪಿ. ಚಂದ್ರಶೇಖರ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಇತರರಿದ್ದರು.