ಗಂಗಾವತಿ: ಸಾಧನೆಯ ದಾರಿ ಸುಗಮವಲ್ಲ, ಆದರೆ ಸಾಧಿಸಿದಾಗ ಉಂಟಾಗುವ ಆನಂದಕ್ಕೆ ಬೆಲೆ ಕಟ್ಟಲಾಗದು. ಸಾಧಿಸುವ ಛಲ ಹೊಂದಿರುವವರನ್ನು ಸೋಲಿಸುವುದು ಅಸಾಧ್ಯ ಎಂದು ಖ್ಯಾತ ಹಾಸ್ಯ ಭಾಷಣಕಾರ ಬಿ. ಪ್ರಾಣೇಶ ಹೇಳಿದರು.
ನಿರಂತರ ಚಟುವಟಿಕೆ ಮಾನಸಿಕ, ದೈಹಿಕ ಆರೋಗ್ಯಕ್ಕೆ ಸದೃಢತೆ ಕೊಡುತ್ತದೆ. ಮಾನವ ತನ್ನ ಜ್ಞಾನ ಹಾಗೂ ಸತ್ಕಾರ್ಯದಿಂದ ಜಗತ್ತನ್ನು ಗೆಲ್ಲಬಹುದು ಎನ್ನುವುದಕ್ಕೆ ಸಾವಿರಾರು ಉದಾಹರಣೆಗಳಿವೆ. ಜೀವನವನ್ನು ಮೌಲ್ಯ-ನೀತಿಗಳೆಂಬ ಇಟ್ಟಿಗೆಗಳಿಂದ ಕಟ್ಟಬೇಕು. ಆತ್ಮಹತ್ಯೆ ರಣಹೇಡಿಗಳ ಕೆಲಸ. ಬದುಕಿನಲ್ಲಿ ಬರುವ ಸವಾಲು ಎದುರಿಸಿ ಜಯಗಳಿಸಬೇಕು. ಆತ್ಮವಿಶ್ವಾಸವೇ ಅದ್ಭುತ ಯಶಸ್ಸಿನ ಗುಟ್ಟು. ಆತ್ಮಸ್ಥೈರ್ಯ ಅಗಾಧ ಕೆಲಸ ಮಾಡಲು ಪ್ರೇರೆಪಿಸುತ್ತದೆ. ಎಲ್ಲರು ಸದಾ ಅಧ್ಯಯನಶೀಲರಾಗಬೇಕು. ಹೆಚ್ಚು ಓದಿದಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ಹೆಚ್ಚು ಓದಿದವನು, ಹೆಚ್ಚು ಕ್ರೀಯಾಶೀಲನಾಗಿರುವವ ನಿರ್ಭಯನಾಗಿ ಬಾಳುತ್ತಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ನಾವು ಸೋಲನ್ನು ಸೋಲಿಸಬೇಕು, ಸವಾಲು ಸ್ವಾಗತಿಸಬೇಕು. ನಮ್ಮ ನಿರಂತರ ಪ್ರಯತ್ನ, ಪರಿಶ್ರಮ ಹಾಗೂ ಸಕಾರಾತ್ಮಕ ಮನೋಭಾವನೆಯಿಂದ ಕೆಲಸ ಕೈಗೊಂಡಾಗ ಗುರಿ ಮುಟ್ಟಲು ಸಾಧ್ಯ ಎಂದರು.ಪ್ರಾಸ್ತಾವಿಕವಾಗಿ ಕೆವೈಟಿಸಿಯ ಸದಸ್ಯ ಗುಂಡೂರು ಪವನ್ ಕುಮಾರ ಮಾತನಾಡಿದರು. ಈ ವೇಳೆ ಡಾ. ಅಮರ್, ಸಂಚಾಲಕ ಅರ್ಜುನ್, ನ್ಯಾಯವಾದಿ ನಾಗರಾಜ ಗುತ್ತೇದಾರ, ಕೃಷ್ಣ ಪ್ರಸಾದ ಉಪಸ್ಥಿತರಿದ್ದರು.