ಕನ್ನಡಪ್ರಭ ವಾರ್ತೆ ಜಮಖಂಡಿ
ಮೊಬೈಲ್ ಗೀಳು ಹೆಚ್ಚಿದ್ದು ವಿದ್ಯಾರ್ಥಿಗಳ ಅಧ್ಯಯನ ಕುಂಠಿತವಾಗಿದೆ. ಯುವಜನರ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ. ಬೆಳಗಾವಿ ಸಮೀಪದ ಹಲಗಾ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಸಂಜೆ 7 ರಿಂದ 9 ಗಂಟೆಯವರೆಗೆ ಟಿವಿ ಮತ್ತು ಮೊಬೈಲ್ ಬಳಕೆ ನಿಲ್ಲಿಸಿ, ಮಕ್ಕಳು ಓದಿಗೆ ಸಮಯ ಮೀಸಲಿಡುವ ನಿರ್ಧಾರ ಕೈಗೊಂಡು ಯಶಸ್ವಿಯಾಗಿದ್ದಾರೆ. ಇದರಿಂದ ಸುತ್ತಲಿನ ಗ್ರಾಮಗಳು ಇದೇ ಮಾದರಿ ಅನುಸರಿಸಿ ಮಕ್ಕಳನ್ನು ಅಭ್ಯಾಸಕ್ಕೆ ಪ್ರೇರೇಪಿಸುತ್ತಿದ್ದಾರೆ. ಸಮಾದಲ್ಲಿ ಇಂಥ ಬದಲಾವಣೆಗಳಾಗಬೇಕು. ಸರ್ಕಾರ ಕಾನೂನು ನಿಯಮಗಳ ಬಲಕ್ಕಿಂತ ಜನರು ಸ್ವಯಂಪ್ರೇರಣೆಯಿಂದ ಕೈಗೊಳ್ಳುವ ನಿರ್ಧಾರಗಳು ಹೆಚ್ಚು ಪರಿಣಾಮಕಾರಿ ಆಗುತ್ತವೆ ಎಂದು ಹೇಳಿದರು. .
ವೀರಶೈವ ಧರ್ಮದ ಪರಂಪರೆ ಬಹಳ ಪ್ರಾಚೀನವಾಗಿದ್ದು, ಜಗದ್ಗುರು ರೇಣುಕಾಚಾರ್ಯರು ಸಮಾಜಕ್ಕೆ ನೀಡಿದ ಮೌಲ್ಯಯುತ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೀರಶೈವ ಮತ್ತು ಲಿಂಗಾಯತ ಸಮಾಜ ಒಂದಾಗಿ ಸಾಗಬೇಕು. ಒಳಪಂಗಡಗಳ ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಏಕತೆ ಮತ್ತು ಸಂಘಟನೆಗೆ ಆದ್ಯತೆ ನೀಡಬೇಕು. ಸಮಾಜವನ್ನು ವಿಭಜಿಸುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ರಂಭಾಪುರಿ ಜಗದ್ಗುರುಗಳು ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.ಕೊಣ್ಣೂರ-ಸಿಂದಗಿಯ ಹೊರಗಿನ ಮಠದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು ಮಾತನಾಡಿ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಜಗದ್ಗುರುಗಳ ಮೇಲಿಟ್ಟಿರುವ ಭಕ್ತಿ, ಶ್ರದ್ಧೆ ಮತ್ತು ಸೇವಾಭಾವ ಶ್ಲಾಘನೀಯ. ಇಷ್ಟಲಿಂಗ ಮಹಾಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿರುವುದು ಧಾರ್ಮಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ. ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ರಂಭಾಪುರಿ ಜಗದ್ಗುರುಗಳ ಕೊಡುಗೆ ಮಹತ್ವದ್ದಾಗಿದೆ. ಜಮಖಂಡಿ ಐತಿಹಾಸಿಕ ನಗರವಾಗಿದ್ದು, ಜಿಲ್ಲಾ ಸ್ಥಾನಮಾನ ಪಡೆಯಬೇಕೆಂಬುದು ಜನರ ಆಶಯವಾಗಿದ್ದು, ಹೋರಾಟಕ್ಕೆ ಜಗದ್ಗುರುಗಳ ಆಶೀರ್ವಾದ ದೊರೆಯಲಿ. ಶೀಘ್ರದಲ್ಲಿ ಜಮಖಂಡಿ ಜಿಲ್ಲೆಯಾಗಲಿ ಎಂದು ಆಶಿಸಿದರು.
ಪ್ರಶಸ್ತಿ ಪ್ರದಾನ: ರಕ್ತದಾನಿ ಸಿದ್ದಪ್ಪ ಬಸಪ್ಪ ಕವಟಗಿ ಅವರಿಗೆ ಜಗದ್ಗುರುಗಳು ರಂಭಾಪುರಿ ಯುವ ಸಿರಿ ಪ್ರಶಸ್ತಿಯನ್ನು ನೀಡಿ ಶುಭ ಹಾರೈಸಿದರು. ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಪ್ರಶಸ್ತಿ ವಾಚನ ಮಾಡಿದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದರು, ಗುರುಸಿದ್ಧೇಶ್ವರ ಸ್ವಾಮಿಗಳು ಬ್ರಹ್ಮಾನಂದ ಆಶ್ರಮ ರಬಕವಿ ಸಮ್ಮುಖ ವಹಿಸಿದ್ದರು.ಬಂಡಿವಾಡದ ಸಾಹಿತ್ಯ ಸಂಶೋಧಕ ಡಾ. ಎ.ಸಿ. ವಾಲಿಯವರು ಉಪನ್ಯಾಸ ನೀಡಿದರು.