ಕನ್ನಡಪ್ರಭ ವಾರ್ತೆ ಕೋಲಾರಕೃತಕ ಬುದ್ದಿಮತ್ತೆ, ಹೊಸ ತಂತ್ರಜ್ಞಾನಕ್ಕೆ ನಾವು ಹೆಚ್ಚು ಉತ್ತೇಜನ ನೀಡಿದರೆ ಮುಂದೊಂದು ದಿನ ಮನುಷ್ಯ ಸಂಬಂಧಗಳು ನಾಶವಾಗುವುದರಲ್ಲಿ ಸಂಶಯವಿಲ್ಲ. ಮಾನವಿಕ ವಿಷಯಗಳ ಅಧ್ಯಯನದಿಂದ ಸಮಾಜದ ಬಹುತ್ವ ಅರಿವು ಸಾಧ್ಯ ಎಂದು ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವೇದಿಕೆಯಲ್ಲಿ ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೋಲಾರ ತೋಟಗಾರಿಕಾ ಮಹಾವಿಶ್ವವಿದ್ಯಾಲಯದಿಂದ ೩ ದಿನಗಳು ನಡೆಯಲಿರುವ ೧೬ನೇ ಅಂತರ ವಿಶ್ವವಿದ್ಯಾಲಯ ಶುಕ್ರವಾರ ಏರ್ಪಡಿಸಿದ್ದ ಯುವಜನೋತ್ಸವ-೨೦೨೫ ವನ್ನು ಉದ್ಘಾಟಿಸಿ ಮಾತನಾಡಿದರು.ಮಾನವಿಕ ವಿಜ್ಞಾನಕ್ಕೆ ಆದ್ಯತೆ ನೀಡಿ
ಶಿಕ್ಷಣ ಮೌಲ್ಯಾಧಾರಿತವಾಗಬೇಕೇ ಹೊರತು ಮಾರುಕಟ್ಟೆಯಾಗಬಾರದು, ತಂತ್ರಜ್ಞಾನದಿಂದ ಇಂದು ಅನೇಕ ದುಷ್ಪರಿಣಾಮ ನಾವು ಕಾಣುತ್ತೇವೆ, ಇದರ ಉಪಯೋಗ ಒಳಿತರ ಕಡೆಗೆ ನಾವು ಮಾಡಬೇಕು, ತಂತ್ರಜ್ಞಾನ ಮನುಕುಲಕ್ಕೆ ಸಹಕಾರಿಯಾಗಬೇಕೇ ವಿನಃ ಮಾರಕವಾಗಬಾರದು, ಆರೋಗ್ಯಕರ, ಮಾನವೀಯ ಸಮಾಜ ನಿರ್ಮಿಸುವುದರಲ್ಲಿ ಯುವಜನರ ಪಾತ್ರ ಬಹಳ ಹಿರಿದು ಎಂದು ಅಭಿಪ್ರಾಪಟ್ಟರು.ಜಿಲ್ಲೆಯಗೆ ಕೆರೆಗಳೇ ಜೀವಜಲ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಕೋಲಾರ ಜಿಲ್ಲೆಯ ಚಿನ್ನ, ಮಾವು, ಹಾಲು ರೇಷ್ಮೆ ನೀಡುವುದರೊಂದಿಗೆ ಇಡೀ ದೇಶಕ್ಕೆ ಮಾದರಿಯಾಗಿದೆ, ಇಲ್ಲಿ ನದಿ ಮೂಲ ಇಲ್ಲದಿದ್ದರೂ ಸಹ ಮೂರು ಸಾವಿರಕ್ಕೂ ಅಧಿಕ ಕೆರೆಗಳಿದ್ದು, ರೈತರಿಗೆ ಸಹಕಾರಿಯಾಗಿದೆ, ಇಲ್ಲಿ ಬೆಳೆಯುವ ಟೊಮೆಟೋ ಜಗತ್ಪ್ರಸಿದ್ಧವಾಗಿದೆ. ಇಲ್ಲಿನ ರೈತರು ಶ್ರಮಿಕರಾಗಿದ್ದು, ಲಭ್ಯವಿರುವ ಸಂಪನ್ಮೂಲದಿಂದ ಒಳ್ಳೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದು ಹೇಳಿದರು.ತಂತ್ರಜ್ಞಾನದಿಂದ ಒಳಿತು-ಕೆಡಕು ಎರಡೂ ಇದ್ದು, ಅವನ್ನು ಯಾವ ರೀತಿಯಲ್ಲಿ ಉಪಯೋಗ ಮಾಡಿ ಕೊಳ್ಳಬೇಕೆಂಬುದರ ಬಗ್ಗೆ ಯುವಜನರಿಗೆ ಜಾಗೃತಿ ಇರುಬೇಕು, ತಂತ್ರಜ್ಞಾನ ಸಾಮಾಜಿಕ ಹಿತಕ್ಕೆ ಬಳಸಬೇಕೇ ವಿನಃ ವಿನಾಶಕ್ಕಲ್ಲ, ಇಂದಿನ ಯುವಜನರು ವಿಸ್ತಾರ ಓದಿಗೆ ಆಸಕ್ತಿ ವಹಿಸಿ ಜೀವನದಲ್ಲಿ ಸಫಲತೆ ಕಾಣಬೇಕೆಂದು ತಿಳಿಸಿದರು.ಕೃಷಿ ತಂತ್ರಜ್ಞಾನ ಆವಿಷ್ಕಾರಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ನಿಖಿಲ್ ಮಾತನಾಡಿ, ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೈತರಿಗೆ ಹೊಸ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡುವುದರ ಮೂಲಕ ತಾಂತ್ರಿಕ ಬೆಳವಣಿಗೆಗೆ ನಾಂದಿ ಹಾಕಬೇಕು, ಕೃಷಿ ಹಾಗೂ ತೋಟಗಾರಿಕೆ ಈ ಜಿಲ್ಲೆಯ ರೈತರ ಜೀವಾಳ, ಮುಳಬಾಗಿಲು ತಾಲ್ಲೂಕಿನ ಪಾಪಮ್ಮ ತಮಗೆ ವಿದ್ಯಾಭ್ಯಾಸ ಇಲ್ಲದಿದ್ದರೂ ಬಿತ್ತನೆ ಬೀಜ ಸಂಗ್ರಹಿಸಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ, ಎಂದರು.ಜಿಪಂ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಕುಲಪತಿ ಡಾ.ವಿ.ವರ್ಧನ್, ಡೀನ್ ಡಾ.ರಾಮಚಂದ್ರ ನಾಯ್ಕ.ಕೆ, ತೋಟಗಾರಿಕೆ ಮಹಾವಿದ್ಯಾಲಯ ಕೋಲಾರದ ಡೀನ್ ಡಾ.ರಾಘವೇಂದ್ರ ಕೆ.ಮೇಸ್ತ, ವ್ಯವಸ್ಥಾಪನ ಮಂಡಳಿ ಸದಸ್ಯರಾದ ಹೆಚ್.ಕೆ.ಮನೋಹರ್, ನಾಚೇಗೌಡ, ಶ್ರೀನಿವಾಸ್ ಗೌಡ ಇದ್ದರು.