ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ದೊರೆತಾಗ ಅವರು ಉತ್ತಮ ಪ್ರಜೆಗಳಾಗಿ ದೇಶದ ಆಸ್ತಿಗಳಾಗುತ್ತಾರೆ. ಈ ನಿಟ್ಟಿನಲ್ಲಿ ಮೂಕನಪಾಳ್ಯ ಶಾಲೆಯ ಮಕ್ಕಳಿಗೆ ಮೂಲಸೌಲಭ್ಯವುಳ್ಳ ಉತ್ತಮ ಶಾಲೆ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಚಾಮರಾಜನಗರ ಮಠಾಧ್ಯಕ್ಷ ಶ್ರೀ ಚನ್ನಬಸವಸ್ವಾಮೀಜಿ ತಿಳಿಸಿದರು. ಮೂಕನಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜೀರ್ಣೋದ್ಧಾರಕ್ಕಾಗಿ ರೋಟರಿ ಸಿಲ್ಕ್‌ಸಿಟಿ ಹಮ್ಮಿಕೊಂಡಿದ್ದ ಆಹಾರ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗ್ರಹವಾಗಿದ್ದ ₹೨ಲಕ್ಷ ಚೆಕ್ ಅನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಟಿವಿಎಸ್ ಕಂಪನಿಗೆ ವಿತರಣೆ ಮಾಡಿ ಮಾತನಾಡಿದರು. ರೋಟರಿ ಸಿಲ್ಕ್ ಸಿಟಿ ಅವರ ಕಾರ್ಯ ಶ್ಲಾಘನೀಯ. ಕಾಡಂಚಿನಲ್ಲಿರುವ ಕುಗ್ರಾಮ ಮೂಕನಪಾಳ್ಯ ಶಾಲೆಯ ಅಭಿವೃದ್ಧಿಗಾಗಿ ₹೨ ಲಕ್ಷ ನೀಡುವ ಜೊತೆಗೆ ಟಿವಿಎಸ್ ಕಂಪನಿಯ ಸಿಎಸ್‌ಆರ್ ನಿಧಿಯಲ್ಲಿ ಸಂಪೂರ್ಣ ಶಾಲೆಯನ್ನು ಅಭಿವೃದ್ಧಿಪಡಿಸುವ ಅವರ ಸಂಕಲ್ಪ ಮೆಚ್ಚುವಂತದ್ದು, ಈ ಸತ್ಕಾರ್ಯಕ್ಕೆ ಗ್ರಾಮದ ಎಲ್ಲರು ಹಣ ನೀಡುವ ಜೊತೆಗೆ ನಮ್ಮೂರ ಶಾಲೆ ಎಂಬ ಅಭಿಮಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಯೇ ಮೊದಲ ಪಾಠಶಾಲೆ, ನಂತರ ಶಾಲೆ ಬರುತ್ತದೆ. ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿಯೇ ದೊರೆತಾಗ ಮಕ್ಕಳು ಸನ್ನಡತೆಯನ್ನು ಕಲಿತು ಶಾಲೆಯ ಬಗ್ಗೆ ಅಭಿಮಾನ ಮೂಡಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಶಾಲೆ ಅಭಿವೃದ್ಧಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.ಕ್ಷೇತ್ರಾ ಶಿಕ್ಷಣಾಧಿಕಾರಿ ಹನುಮಂತಶೆಟ್ಟಿ ಮಾತನಾಡಿ, ಟಿವಿಎಸ್ ಕಂಪನಿ ಹಾಗೂ ರೋಟರಿ ಸಿಲ್ಕ್‌ಸಿಟಿ ಅವರು ಮೂಕನಪಾಳ್ಯ ಶಾಲೆ ಅಭಿವೃದ್ಧಿಗೆ ಲಕ್ಷಾಂತರ ರು. ನೀಡುವ ಜೊತೆಗೆ ತಾವೇ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡುವ ಜೊತೆಗೆ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡುತ್ತಿರುವುದು ಸಂತೋಷ ತಂದಿದೆ. ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು.ರೋಟರಿ ಸಿಲ್ಕ್‌ಸಿಟಿ ಮಾಜಿ ಅಧ್ಯಕ್ಷ ವಿಶ್ವಾಸ್ ಮಾತನಾಡಿ, ಮೂಕನಪಾಳ್ಯ ಗ್ರಾಮದಲ್ಲಿ 1ರಿಂದ5ನೇ ತರಗತಿಯವರೆಗೆ ೩೦ ಮಕ್ಕಳಿದ್ದು, ಶಿಥಿಲವಾಗಿರುವ ಒಂದೇ ಕೊಠಡಿಯಲ್ಲಿ ಐದೂ ತರಗತಿಯ ಮಕ್ಕಳು ಕುಳಿತು ಪಾಠಪ್ರವಚನ ಮಾಡುತ್ತಿರುವುದು ನೋಡಿದ್ದೇವೆ. ಈ ಶಾಲೆಯನ್ನು ಅಭಿವೃದ್ಧಿಪಡಿಸುವ ಸಂಕಲ್ಪದೊಂದಿಗೆ ಮುನ್ನಡೆಯಾದಾಗ ಎಲ್ಲವು ಸುಲಲಿತವಾಗಿ ನಡೆಯಲಿದೆ. ಗ್ರಾಮಸ್ಥರು ಒಂದು ಲಕ್ಷ ರು. ಪುಣಜನೂರು ಗ್ರಾಪಂಯಿಂದ ೨ ಲಕ್ಷ ರು. ನೀಡಿರುವುದು ಹೆಮ್ಮೆ ವಿಚಾರವಾಗಿದೆ. ಮೂಕನಪಾಳ್ಯ ಶಾಲೆ ನಿರ್ಮಾಣಕ್ಕೆ ಈಗಾಗಲೇ ಕಾಮಗಾರಿ ಆರಂಭವಾಗಿದೆ ಎಂದರು. ಗ್ರಾಮದ ಮುಖಂಡರು ಹಾಗೂ ನಿವೃತ್ತ ಅಧಿಕಾರಿ ಸುಂದರ್ ನಾಯ್ಕ್ ಮಾತನಾಡಿ, ನಮ್ಮ ಗ್ರಾಮದ ಶಾಲೆಯ ಅಭಿವೃದ್ಧಿಗೆ ರೋಟರಿ ಸಿಲ್ಕ್‌ಸಿಟಿ ಶ್ರಮಿಸುತ್ತಿರವುದು ಅಭಿನಂದನೀಯ. ಸಮಾಜ ಪರಿವರ್ತನೆಯಲ್ಲಿ ಅವರಿಗಿರುವ ಕಾಳಜಿ ಬಹಳ ಮುಖ್ಯವಾಗಿದೆ. ಶಾಲೆಗೆ ಶಿಕ್ಷಕರ ನಿಯೋಜನೆ ಸೇರಿದಂತೆ ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುಣಜನೂರು ಗ್ರಾಪಂ ಅಧ್ಯಕ್ಷೆ ಶಿವಿಬಾಯಿ, ರೋಟರಿ ಸಿಲ್ಕ್‌ಸಿಟಿ ಅಧ್ಯಕ್ಷ ಮಾಣಿಕ್‌ಚಂದ್ ಸಿರವಿ, ಕಾರ್ಯದರ್ಶಿ ಶಮಿತ್, ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್, ಮುರುಗೇಂದ್ರಸ್ವಾಮಿ ಮರಿಯಾಲ, ಶ್ರೀನಿಧಿ, ಶರತ್‌ಕುಮಾರ್, ಮುಖಂಡರಾದ ಶಿವಾಜಿನಾಯ್ಕ್, ಕೃಷ್ಣನಾಯ್ಕ್, ಎಸ್‌ಡಿಎಂಸಿ ಅಧ್ಯಕ್ಷೆ ಶಾಂತಿ ಬಾಯಿ, ಶಾಲೆಯ ಮುಖ್ಯ ಶಿಕ್ಷಕ ರಘುಕುಮಾರ್, ಎಸ್‌ಡಿಎಂಸಿ ಕಾರ್ಯದರ್ಶಿ ಉಮಾಶಂಕರ್, ಗ್ರಾಮ ಯಜಮಾನರು ಮತ್ತು ಮುಖಂಡರು, ವಿದ್ಯಾರ್ಥಿಗಳು ಇದ್ದರು.