ಮಾತೃಭಾಷೆ ಬೆಳವಣಿಗೆಯಿಂದ ಸ್ವಾತಂತ್ರ್ಯ-ಪ್ರಜಾಪ್ರಭುತ್ವದ ಆಶಯಗಳಿಗೆ ಬಲ; ಗೋಪಿ

KannadaprabhaNewsNetwork |  
Published : Mar 22, 2026, 02:00 AM IST
ಬಳ್ಳಾರಿಯ ಪಾಂಚಜನ್ಯ ಸಭಾಂಗಣದಲ್ಲಿ ಜರುಗಿದ ಪಂ.ದೀನ ದಯಾಳ ಉಪಾಧ್ಯಾಯರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಗೋಪಿ ಅವರು ಮಾತನಾಡಿದರು.  | Kannada Prabha

ಸಾರಾಂಶ

ಮಾತೃಭಾಷೆ ಮಾನವನ ಚಿಂತನೆ, ಸಂಸ್ಕೃತಿ ಮತ್ತು ವ್ಯಕ್ತಿತ್ವದ ಮೂಲವಾಗಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗೆ ಮಹತ್ವದ ಪಾತ್ರ ವಹಿಸುತ್ತದೆ

ಬಳ್ಳಾರಿ: ಮಾತೃಭಾಷೆ ಬೆಳವಣಿಗೆಯಿಂದ ಮಾತ್ರ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಆಶಯಗಳು ಬಲಗೊಳ್ಳಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್ಎಸ್‌) ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಗೋಪಿ ತಿಳಿಸಿದರು.

ನಗರದ ಡಾ.ರಾಜಕುಮಾರ ರಸ್ತೆಯಲ್ಲಿರುವ ಪಾಂಚಜನ್ಯ ಸಭಾಂಗಣದಲ್ಲಿ, ವಿದ್ಯಾರ್ಥಿ ಶಿಕ್ಷಣ ಸಂಸ್ಕೃತಿ ಸೇವಾ ಸಮಿತಿ ಹಾಗೂ ಎಬಿವಿಪಿ ನಗರ ಘಟಕಗಳು ಸಂಯುಕ್ತವಾಗಿ ಆಯೋಜಿಸಿದ್ದ ಪಂ.ದೀನ ದಯಾಳ ಉಪಾಧ್ಯಾಯರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾತೃಭಾಷೆ ಮಾನವನ ಚಿಂತನೆ, ಸಂಸ್ಕೃತಿ ಮತ್ತು ವ್ಯಕ್ತಿತ್ವದ ಮೂಲವಾಗಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗೆ ಮಹತ್ವದ ಪಾತ್ರ ವಹಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಈ ಪಾಲ್ಗೊಳ್ಳುವಿಕೆಗೆ ಭಾಷೆಯ ಅರಿವು ಮತ್ತು ಸ್ಪಷ್ಟತೆ ಮುಖ್ಯ. ಅದರಲ್ಲಿ ಮಾತೃಭಾಷೆಯ ಸ್ಥಾನ ಅತ್ಯುನ್ನತವಾಗಿದೆ. ಮಾತೃಭಾಷೆ ಸಂವಾದಕ್ಕೆ ಸೇತುವೆಯಾಗಿ ಕೆಲಸ ಮಾಡುತ್ತದೆ. ಜನರ ನಡುವೆ ನಂಬಿಕೆಯನ್ನು ವೃದ್ಧಿಸುತ್ತದೆ. ಮಾತೃಭಾಷೆ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುತ್ತದೆ. ಪ್ರಜಾಪ್ರಭುತ್ವವು ವೈವಿಧ್ಯತೆಯನ್ನು ಗೌರವಿಸುವ ವ್ಯವಸ್ಥೆಯಾಗಿರುವುದರಿಂದ, ಭಾಷೆಯ ಸಂರಕ್ಷಣೆ ಅದರ ಅವಿಭಾಜ್ಯ ಭಾಗವಾಗಿದೆ ಎಂದರು.

ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ಹೆಮ್ಮೆ ಇರಬೇಕು. ಮಾನವನ ಜೀವನಕ್ಕೆ ಒಂದು ಗುರುತು, ಒಂದು ಅಸ್ತಿತ್ವ ನೀಡುವುದೇ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವಾಗಿದೆ. ಭಾರತವು ವೈವಿಧ್ಯಮಯ ಸಂಸ್ಕೃತಿಗಳ, ಶ್ರೀಮಂತ ಪರಂಪರೆಗಳ ದೇಶವಾಗಿದ್ದು ನಮ್ಮ ಐತಿಹ್ಯ ಪರಂಪರೆ ಬಗ್ಗೆ ಹೆಮ್ಮೆ ಇರಬೇಕು.

ಸಂಸ್ಕೃತಿ ಎಂದರೆ ನಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ಪ್ರತಿಫಲಿಸುವ ನಡವಳಿಕೆ, ಆಚರಣೆ, ಕಲೆ, ಸಾಹಿತ್ಯ ಮತ್ತು ಮೌಲ್ಯಗಳ ಸಮೂಹವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ಶಿಕ್ಷಣ ಸಂಸ್ಕೃತಿ ಸೇವಾ ಸಮಿತಿ ಕಾರ್ಯದರ್ಶಿ ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರು ಮಾತನಾಡಿ, ಇತಿಹಾಸವು ನಮ್ಮ ಪೂರ್ವಜರ ಸಾಧನೆಗಳು, ಹೋರಾಟಗಳು ಮತ್ತು ತ್ಯಾಗಗಳ ಪ್ರತಿಬಿಂಬವಾಗಿದೆ. ಐತಿಹಾಸಿಕ ಸ್ಥಳಗಳು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳು ಮತ್ತು ಪ್ರಾಚೀನ ಭಾರತದ ವಿಜ್ಞಾನ-ಸಾಹಿತ್ಯ ಸಾಧನೆಗಳು ನಮ್ಮ ದೇಶದ ಮಹತ್ವವನ್ನು ತಿಳಿಸುತ್ತವೆ. ಇತಿಹಾಸವನ್ನು ತಿಳಿದುಕೊಂಡಾಗ ನಾವು ನಮ್ಮ ಭೂತಕಾಲದಿಂದ ಪಾಠಗಳನ್ನು ಕಲಿತು, ಭವಿಷ್ಯವನ್ನು ಉತ್ತಮವಾಗಿ ನಿರ್ಮಿಸಬಹುದು ಎಂದು ಅಭಿಪ್ರಾಯಪಟ್ಟರು. ನಿವೃತ್ತ ಬ್ಯಾಂಕ್ ಅಧಿಕಾರಿ ಬಿ.ಎಲ್.ವೆಂಕಟೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಿವೃತ್ತ ಉಪನ್ಯಾಸಕ ಹಾಗೂ ಅಧ್ಯಾತ್ಮ ಚಿಂತಕ ಎನ್.ಬಸವರಾಜ, ಎಬಿವಿಪಿ ಜಿಲ್ಲಾ ಸಂಚಾಲಕ ಕೆ.ದಿಲೀಪಕುಮಾರ ಹಾಗೂ ಭರತ ತಳವಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ಮುನ್ನ ಜಡೇಶ ಎಮ್ಮಿಗನೂರು ಅವರು ಕನ್ನಡಗೀತೆಗಳ ಗಾಯನ ಪ್ರಸ್ತುತಪಡಿಸಿದರು. ಶಿವಕುಮಾರ್ ಹಾರ್ಮೋನಿಯಂ ಹಾಗೂ ಹರ್ಷಾ ಆಚಾರ್ ತಬಲಾ ಸಾಥ್ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಘಟಗಿ ಬಳಿ ಟ್ಯಾಂಕರ್‌ನಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್‌ ಸೋರಿಕೆ
ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಸಂಕಲ್ಪ