ಕನ್ನಡಪ್ರಭ ವಾರ್ತೆ ನಾಲತವಾಡ
ಪಟ್ಟಣ ಅಭಿವೃದ್ಧಿ ಎಂದರೆ ಕೇವಲ ಸರ್ಕಲ್‌ಗಳು ಅಥವಾ ಅಲಂಕಾರಿಕ ಯೋಜನೆಗಳು ಅಲ್ಲ. ಜನರ ಜೀವನ ಸುಧಾರಿಸಲು ಅಗತ್ಯವಾದ ಮೂಲ ಸೌಲಭ್ಯಗಳು ಇರಬೇಕು. ಶಾಲೆ, ಆಸ್ಪತ್ರೆ, ಶೌಚಾಲಯ, ರಸ್ತೆ ಇವುಗಳ ಮೂಲಕವೇ ಪಟ್ಟಣ ಅಭಿವೃದ್ಧಿ ಸಾಧ್ಯ. ನಾನು ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸದಾ ಬದ್ಧನಾಗಿದ್ದೇನೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಗುರುವಾರ ನಡೆದ ಹೊಸ ನಾಡ ಕಚೇರಿ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಹಳೆಯ ನಾಡ ಕಚೇರಿಯಲ್ಲಿ ಸಾರ್ವಜನಿಕರಿಗೆ ದಾಖಲೆ ಕಾರ್ಯಗಳಲ್ಲಿ ತೊಂದರೆ ಆಗುತ್ತಿತ್ತು. ಸ್ಥಳದ ಅಭಾವದಿಂದ ಜನರು ನಿಂತು ಸೇವೆ ಪಡೆಯಬೇಕಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಇಂದಿನ ದಿನ ₹2 ಕೋಟಿ ವೆಚ್ಚದಲ್ಲಿ ಹೊಸ ನಾಡ ಕಚೇರಿ ಕಟ್ಟಡ ನಿರ್ಮಾಣ ಪ್ರಾರಂಭಿಸುತ್ತಿದ್ದೇವೆ ಎಂದರು.
ಈ ಕಟ್ಟಡ ಪೂರ್ಣಗೊಂಡ ನಂತರ ಜನರಿಗೆ ಸುಸಜ್ಜಿತ ಸೌಲಭ್ಯ ದೊರೆಯಲಿದೆ. ನಾಲತವಾಡ ಪಟ್ಟಣದ ಅಭಿವೃದ್ಧಿಗೆ ಈ ಸಾಲಿನಲ್ಲಿ ₹9 ಕೋಟಿ ಅನುದಾನ ನೀಡಿದ್ದೇನೆ. ಈ ಮೊತ್ತವನ್ನು ರಸ್ತೆ, ಒಳಚರಂಡಿ ವ್ಯವಸ್ಥೆ ಹಾಗೂ ಸಾರ್ವಜನಿಕ ಉಪಯೋಗ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಪಟ್ಟಣದ ಪ್ರತಿ ಬಡಾವಣೆಯಲ್ಲಿಯೂ ಅಭಿವೃದ್ಧಿಯ ಚಿಹ್ನೆ ಮೂಡಬೇಕು. ಇದು ನನ್ನ ಕನಸು ಎಂದರು.ಸರ್ಕಲ್‌ಗಳ ನಿರ್ಮಾಣದ ಕುರಿತು ಮಾತನಾಡಿ, ಪ್ರತಿ ಮೂಲೆಗೂ ಸರ್ಕಲ್‌ಗಳನ್ನು ನಿರ್ಮಿಸುವುದು ಅಭಿವೃದ್ಧಿಯಲ್ಲ. ಸುಪ್ರೀಂ ಕೋರ್ಟ್ ಸರ್ಕಲ್ ನಿರ್ಮಾಣದ ವಿರುದ್ಧ ಆದೇಶ ನೀಡಿದರೂ ಇಂದಿನ ಸರ್ಕಾರ ಹಾಗೂ ಅಧಿಕಾರಿಗಳು ಮೌನವಾಗಿದ್ದಾರೆ. ಸರ್ಕಲ್ ನಿರ್ಮಿಸುವ ಬದಲು ಸಾರ್ವಜನಿಕ ಸೌಲಭ್ಯಗಳ ಮೇಲೆ ಹಣ ಹೂಡಬೇಕು. ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದರೆ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಅಭಿವೃದ್ಧಿ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಬೇಕು. ವಿಳಂಬ ಅಥವಾ ಕಳಪೆ ಕಾಮಗಾರಿ ಕಂಡುಬಂದರೆ ಅದರ ಹೊಣೆ ಶಾಸಕರಿಗಲ್ಲ. ಜನರು ಶಾಸಕರ ಹೆಸರು ಕೆಡಿಸಲು ಪ್ರಯತ್ನಿಸುವ ಬದಲು ಗುತ್ತಿಗೆದಾರರಿಂದಲೇ ಉತ್ತರ ಕೇಳಬೇಕು. ನಾನು ಸದಾ ಅಭಿವೃದ್ಧಿ ಕಾಮಗಾರಿಗಳಿಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್ ಮಾತನಾಡಿ, ನಾಲತವಾಡ ಪಟ್ಟಣದ ಅಭಿವೃದ್ಧಿಗೆ ಶಾಸಕ ಸಿ.ಎಸ್.ನಾಡಗೌಡ ಅವರು ನೀಡುತ್ತಿರುವ ಬೆಂಬಲ ಪ್ರಶಂಸನೀಯ. ಹೊಸ ನಾಡ ಕಚೇರಿ ಕಟ್ಟಡ ನಿರ್ಮಾಣದಿಂದ ಜನರಿಗೆ ಸುಲಭ ಸೇವೆ ದೊರೆಯಲಿದೆ ಎಂದರು. ಗ್ರಾಮ ಆಡಳಿತಾಧಿಕಾರಿ ಗಂಗಾಧರ ಜೂಲಗುಡ್ಡ ಅತಿಥಿಗಳನ್ನು ಸ್ವಾಗತಿಸಿದರು. ಬಸವರಾಜ ಹುಡೇದ ನಿರೂಪಿಸಿದರು.
ಈ ವೇಳೆ ಶಂಕರರಾವ ದೇಶಮುಖ, ಪಪಂ ಸದಸ್ಯ ಪೃಥ್ವಿರಾಜ್ ನಾಡಗೌಡ, ಹಿರಿಯರಾದ ಶಿವಪ್ಪ ತಾತರೆಡ್ಡಿ, ಎ.ಜಿ.ಗಂಗನಗೌಡರ, ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಉಪತಹಶೀಲ್ದಾರ ಎನ್.ಬಿ.ಮಾವಿನಕಟ್ಟಿ, ಕಂದಾಯ ನಿರೀಕ್ಷಕ ವೇಂಕಟೇಶ ಅಂಬಿಗೇರ, ಗ್ರಾಮ ಆಡಳಿತಾಧಿಕಾರಿ ಜಿ.ಎಸ್.ಜೂಲಗುಡ್ಡ, ಸಚಿನ್ ಗೌಡರ, ಗುತ್ತಿಗೆದಾರ ಜಗದೀಶ ಡೇರೆದ ಪ.ಪಂ ಸದಸ್ಯರು ಹಾಗೂ ಸ್ಥಳೀಯ ಗಣ್ಯರು ಭಾಗವಹಿಸಿದ್ದರು.